ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾ

ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾ

ಬೆಂಗಳೂರು, ಜು.20 : ದಕ್ಷಿಣ ವಲಯದ ವಿವಿಧ ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾಗೆ ಮೇಯರ್ ಗಂಗಾಬಿಕೆ ಚಾಲನೆ ನೀಡಿದರು.

ಲಾಲ್ಬಾಗ್, ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಹಾಗೂ ಕಮ್ಯೂನಿಟಿ ಕಾಲೇಜಿನಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡಣೆ, ಪಿಒಪಿ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು, ನೀರಿನ ಮಿತಬಳಕೆ ಹಾಗೂ ಪರಿಸರ ಸಂರಕ್ಷಣೆ ಕುರಿತು ನಾಗರಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮಕ್ಕಳ ಪಾತ್ರ ಬಹುಮುಖ್ಯವಾಗಿದೆ ಎಂದರು.

ಯಾವುದೆ ವಿಷಯವನ್ನಾಗಲಿ ಮಕ್ಕಳ ಮೂಲಕ ಅರಿವು ಮೂಡಿಸಲು ಮುಂದಾದರೆ ಅದು ತ್ವರಿತವಾಗಿ ಅನುಷ್ಠಾನಗೊಳ್ಳುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ದರಿಂದ ಮಕ್ಕಳು ನಿಮ್ಮ ಮನೆ ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು. ಅದನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ನಗರದಲ್ಲಿ ಪ್ರತಿನಿತ್ಯ ಐದು ಸಾವಿರ ಟನ್ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತಿದ್ದು, ನಾಗರಿಕರು ಅದನ್ನು ಸಮರ್ಪಕವಾಗಿ ವಿಂಗಡಿಸಿ ನೀಡದ ಕಾರಣ ಕ್ವಾರಿಗಳಲ್ಲಿ ಸುರಿಯಲಾಗುತ್ತಿದೆ. ಹೀಗಾಗಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಹೊಸ ಟೆಂಡರ್ ಕರೆಯಲಾಗಿದ್ದು, ಸೆ. 1 ರಿಂದ ಜಾರಿಯಾಗಲಿದೆ. ಆಗ ಹಸಿ ಕಸ, ಒಣ ಕಸ, ಪ್ರಾಣಿ ತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಬೇರ್ಪಡಿಸಿಕೊಡಬೇಕು. ಇಲ್ಲವಾದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಈಗಾಗಲೆ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತಿನಿತ್ಯವೂ ಪಾಲಿಕೆಯ ಆರೋಗ್ಯಾಧಿಕಾರಿಗಳು ಸಗಟು ವ್ಯಾಪಾರ ಮಳಿಗೆ ಹಾಗೂ ಚಿಲ್ಲರೆ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಪ್ತಿ ಮಾಡಿ ದಂಡ ವಿಧಿಸುತ್ತಿದ್ದಾರೆ. ಮುಂದೆಯೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡಿದರೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗುವುದು. ಬೀದಿಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಕೈಚೀಲಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಅವರಿಗೆ ಅದರ ಬದಲು ಪೇಪರ್ ಚೀಲ ಇಲ್ಲವೆ ಬಟ್ಟೆ ಚೀಲ ಬಳಸುವಂತೆ ಸೂಚನೆ ನೀಡಲಾಗಿದೆ ಎಂದರು.

ನಗರದಲ್ಲಿ ನೀರಿನ ಅಭಾವ ದಿನೇ ದಿನೇ ಹೆಚ್ಚುತ್ತಲೆ ಇದೆ. ಈಗಾಗಲೆ ನಗರದಲ್ಲಿ 1.30ಕೋಟಿ ಜನಸಂಖ್ಯೆ ಇದ್ದು, ನಿತ್ಯ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ವಲಸೆ ಬರುತ್ತಿದ್ದಾರೆ. ಆದ್ದರಿಂದ ಈಗಿನಿಂದಲೆ ನೀರನ್ನು ಮಿತವಾಗಿ ಬಳಸಲು ಮುಂದಾಗಬೇಕು. ಕಟ್ಟಡ ನಿರ್ಮಾಣದ ವೇಳೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಬಳಸುವುದರಿಂದ ಪರಿಸರಕ್ಕೆ ಮಾರಕ. ಗಣೇಶ ಚತುರ್ಥಿಯಂದು ದೊಡ್ಡ ದೊಡ್ಡ ಪಿಒಪಿ ಗಣೇಶ ಮೂರ್ತಿಗಳನ್ನು ಕೂರಿಸಿ ನಂತರ ಕೆರೆಗಳಲ್ಲಿ ವಿಸರ್ಜಿಸುತ್ತಾರೆ. ಇದರಿಂದ ನೀರು ಕಲುಷಿತವಾಗಿ ಹಲವು ರೋಗಗಳು ಹರಡುತ್ತವೆ. ಪಿಒಪಿ ಮೂರ್ತಿಗಳ ಬದಲು ಮಣ್ಣಿನ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಿಸೋಣ ಎಂದರು.

ಜಾಥಾದಲ್ಲಿ ಪಾಲಿಕೆ ಸದಸ್ಯ ನಾಗರಾಜ್, ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು, ಶಾಲಾ ಮುಖ್ಯಸ್ಥರು ಹಾಗೂ ಇತರೆ ಗಣ್ಯರು ಇದ್ದರು.

ಜಯನಗರ 4ನೇ ಬ್ಲಾಕ್ ನಲ್ಲಿ ಜಾಥಾ ನಡೆಯುತ್ತಿದ್ದ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಕೈಚೀಲ ಬಳಸುವುದನ್ನು ಕಂಡ ಮೇಯರ್ ಗಂಗಾಂಬಿಕೆ, ಪ್ಲಾಸ್ಟಿಕ್ ಕೈಚೀಲದ ಬದಲು ಪೇಪರ್ ಅಥವಾ ಬಟ್ಟೆ ಚೀಲ ಉಪಯೋಗಿಸಿ. ಮತ್ತೆ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುವುದು ಕಂಡುಬಂದರೆ ನಿಮ್ಮ ಅಂಗಡಿಯಲ್ಲಿನ ಸಾಮಗ್ರಿಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos