ಪತ್ನಿಯ ದೂರಿಗೆ ಹೆದರಿ ನಿರೀಕ್ಷಣಾ ಜಾಮೀನು ಕೋರಿದ ಪತಿ!

ಪತ್ನಿಯ ದೂರಿಗೆ ಹೆದರಿ ನಿರೀಕ್ಷಣಾ ಜಾಮೀನು ಕೋರಿದ ಪತಿ!

ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಕ್ರಿಮಿನಲ್‌ ದೂರು ದಾಖಲಾದ ನಂತರ ಬಂಧನ ಸಾಧ್ಯತೆ ಅಥವಾ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಆರೋಪಿ ನ್ಯಾಯಾಲಯದ ಮೊರೆ ಹೋಗುವುದು ಸಹಜ. ಆದರೆ, ಇಲ್ಲೊಂದು ಅಪರೂಪ ಪ್ರಕರಣದಲ್ಲಿ ಪತ್ನಿ ವಿರುದ್ಧ ದೂರು ದಾಖಲಿಸಿದ್ದ ಪತಿರಾಯ, ಪತ್ನಿ ಪ್ರತಿ ದೂರು ಸಲ್ಲಿಸಬಹುದು ಎಂದು ಹೆದರಿಯೇ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕೌಟುಂಬಿಕ ವ್ಯಾಜ್ಯ ಸಂಬಂಧ ವ್ಯಕ್ತಿಯೊಬ್ಬ ಪತ್ನಿ ಹಾಗೂ ಆಕೆಯ ಕುಟುಂಬದ ಸದಸ್ಯರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದರಿಂದ ಪತ್ನಿ ಪ್ರತಿ ದೂರು ದಾಖಲಿಸಬಹುದು. ಒಂದೊಮ್ಮೆ ದೂರು ಸಲ್ಲಿಸಿದರೆ ತಾನು ಬಂಧನಕ್ಕೆ ಗುರಿಯಾಗುವುದಲ್ಲದೆ, ಉದ್ಯೋಗವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿ ಕುಟುಂಬ ಸದಸ್ಯರ ಸಮೇತ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದ. ಪತಿಯ ಮುನ್ನೆಚ್ಚರಿಕೆ ಕಂಡು ಅಚ್ಚರಿಗೆ ಗುರಿಯಾದ ಹೈಕೋರ್ಟ್‌, ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಆತನ ಅರ್ಜಿ ವಜಾಗೊಳಿಸಿ ನಿರೀಕ್ಷಣಾ ಜಾಮೀನು ಮನವಿ ತಿರಸ್ಕರಿಸಿದೆ.

ಬೆಂಗಳೂರಿನ ಜೆ.ಪಿ.ನಗರದ ನಿತಿನ್‌ ಮತ್ತು ಪಲ್ಲವಿ (ಇಬ್ಬರ ಹೆಸರು ಬದಲಿಸಲಾಗಿದೆ) 2018ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಎರಡೇ ತಿಂಗಳಿಗೆ ಪತ್ನಿ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರಿಗೆ ನಿತಿನ್‌ ದೂರಿತ್ತಿದ್ದರು. ‘ಸಂಸಾರ ವಿಚಾರಕ್ಕೆ ನನಗೂ ಮತ್ತು ಹೆಂಡತಿಗೆ ಮಾತು ಮಾತು ಬೆಳೆಯಿತು. ಈ ಸಮಯದಲ್ಲಿ ಹೆಂಡತಿ ತನ್ನ ಅಪ್ಪ ಹಾಗೂ ಅಣ್ಣನನ್ನು ಮನೆಗೆ ಕರೆಸಿಕೊಂಡಿದ್ದಳು. ಅವರು ನನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ನಿತಿನ್‌ ದೂರಿನಲ್ಲಿ ದೂರಿದ್ದರು. ಇದರಿಂದ ಪೊಲೀಸರು ಪಲ್ಲವಿ, ಆಕೆಯ ಅಪ್ಪ ಹಾಗೂ ಅಣ್ಣನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಬಳಿಕ ಪ್ರಕರಣದ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಈ ಮಧ್ಯೆ 2018ರ ನವೆಂಬರ್‌ನಲ್ಲಿ ಪಲ್ಲವಿ, ನಗರದ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಿಗೆ ಪತ್ರ ಬರೆದು ತನ್ನ ಹಾಗೂ ಪತಿಯ ನಡುವಿನ ಪ್ರಕರಣವನ್ನು ರಾಜಿ ಸಂಧಾನದಿಂದ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದರು. ಪತ್ನಿ ಬರೆದ ಈ ಪತ್ರದಿಂದ ನಿತಿನ್‌ ಹೆದರಿದರು. ತನ್ನ ಹಾಗೂ ತನ್ನ ಕುಟುಂಬದ ಸದಸ್ಯರ ವಿರುದ್ಧ ದೂರು ದಾಖಲಿಸಬಹುದು ಎಂಬುದು ಪತ್ನಿ ಬರೆದಿರುವ ಈ ಪತ್ರದಿಂದ ತಿಳಿದು ಬರುತ್ತದೆ. ಒಂದೊಮ್ಮೆ ಪತ್ನಿ ದೂರು ದಾಖಲಿಸಿದರೆ ತಾವು ಹಾಗೂ ಕುಟುಂಬದ ಸದಸ್ಯರು ಬಂಧನಕ್ಕೆ ಗುರಿಯಾಗುತ್ತೇವೆ. ಇನ್ನು ಖಾಸಗಿ ಕಂಪನಿಯಲ್ಲಿನ ತನ್ನ ಉದ್ಯೋಗವೂ ಹೋಗುತ್ತದೆ. ಆದ್ದರಿಂದ ಪತ್ನಿ ದೂರು ದಾಖಲಿಸಿ, ಪೊಲೀಸರು ಬಂಧನ ಮಾಡಿದರೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಆದೇಶಿಸಬೇಕು ಎಂದು ಕೋರಿ ನಿತಿನ್‌, ಆತನ ಪೋಷಕರು ಮತ್ತು ಸಹೋದರಿ ಅಧೀನ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದನ್ನು ನಗರದ 71ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿತ್ತು. ಹೀಗಾಗಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ್‌ ಅವರು, ಪತ್ನಿಯ ವಿರುದ್ಧವೇ ನಿತಿನ್‌ ದೂರು ದಾಖಲಿಸಿದ್ದಾರೆ. ಹೀಗಾಗಿಯೇ ಪತ್ನಿ ರಾಜಿ ಸಂಧಾನದಿಂದ ತಮ್ಮ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಅಲ್ಲದೆ, ತಾನು ಯಾವುದೇ ದೂರು ದಾಖಲಿಸಿಲ್ಲ ಎಂದು ಪತ್ರದಲ್ಲಿ ಆಕೆ ಸ್ಪಷ್ಟಪಡಿಸಿರುವ ಕಾರಣ ಅರ್ಜಿದಾರರಿಗೆ ಪೊಲೀಸರಿಂದ ಬಂಧನದ ಭೀತಿ ಇಲ್ಲ ಎಂಬುದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಕೇವಲ ಬಂಧನ ಭೀತಿಯಷ್ಟೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಸಮರ್ಪಕ ಕಾರಣವಾಗುವುದಿಲ್ಲ. ಬಂಧನಕ್ಕೆ ಗುರಿಯಾಗುವ ಸಾಧ್ಯತೆ ಕಂಡು ಬರಬೇಕು ಹಾಗೂ ನ್ಯಾಯಾಲಯ ಅದನ್ನು ನಂಬಲು ನ್ಯಾಯಸಮ್ಮತ ಕಾರಣಗಳಿರಬೇಕು. ಪ್ರಕರಣದಲ್ಲಿ ಅರ್ಜಿದಾರರು ಬಂಧನಕ್ಕೆ ಗುರಿಯಾಗುವ ಸಾಧ್ಯತೆಯಿದೆ ಎಂಬುದನ್ನು ನಂಬಲು ಸಮರ್ಪಕ ಕಾರಣಗಳು ಕಂಡುಬಂದಿಲ್ಲ. ಆದ್ದರಿಂದ ಅರ್ಜಿದಾರರು ಯಾವಾಗಲಾದರೂ ಅಥವಾ ಯಾವುದೇ ಪ್ರಕರಣದಲ್ಲಾದರೂ ಬಂಧಿತರಾದರೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು ಎಂದು ನಿರ್ದೇಶಿಸಲಾಗದು ಹಾಗೂ ಆ ಸಂಬಂಧ ‘ಬ್ಲಾಂಕೆಟ್‌’ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳು ಅರ್ಜಿ ವಜಾಗೊಳಿಸಿ, ನಿರೀಕ್ಷಣಾ ಜಾಮೀನು ನಿರಾಕರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos