ಪಾಕ್ ಗೆ ನೀರು ಬಿಡಬಾರದು: ಅರ್ಜುನ್ ಮೇಘ್ವಾಲ್

ಪಾಕ್ ಗೆ  ನೀರು ಬಿಡಬಾರದು: ಅರ್ಜುನ್ ಮೇಘ್ವಾಲ್

ನವದೆಹಲಿ, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ನಮ್ಮಭಾರತ ದೇಶಕ್ಕೆ ಸಂಬಂಧಿಸಿದ ನೀರು ಪಾಕಿಸ್ತಾನಕ್ಕೆ ಹೋಗದಂತೆ ತಡೆಯಬೇಕಿದೆ. ನಾವೇಕೆ ಪಾಕಿಸ್ತಾನಿಯರಿಗೆ ನೀರು ಕೊಡಬೇಕು ಎಂದು ಕೇಂದ್ರ ಸಚಿವ ಅರ್ಜುನ್ ಮೇಘ್ವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧೂ ನದಿ ನೀರಿನ ಒಪ್ಪಂದವನ್ನು ಕೈಬಿಟ್ಟು, 5.3 ಲಕ್ಷ (0.53 ಮಿಲಿಯನ್ ಎಕರೆ ಅಡಿ ನೀರು ತಡೆಯುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಹೋಗುವ ನೀರನ್ನು ತಡೆದರೆ ಪಂಜಾಬ್ ಹಾಗೂ ರಾಜಸ್ಥಾನದ ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡಬಹುದು. ಇಲ್ಲವೇ ಕೃಷಿಗೆ ಬಳಕೆ ಮಾಡಿಕೊಳ್ಳಬಹುದು. ಸಂಗ್ರಹಿಸಿಟ್ಟ ನೀರಿನಿಂದ ಹೆಚ್ಚಿನ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಾಕ್ ಗೆ ಪೂರೈಕೆಯಾಗುವ ನೀರನ್ನು ತಡೆಯುವ ಕ್ರಮಕೈಗೊಳ್ಳಲಿದೆ ಎಂದರು.

ಪುಲ್ವಾಮಾ ದಾಳಿಯ ಬಳಿಕ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ಕೂಡ ಪಾಕಿಸ್ತಾನಕ್ಕೆ ಹೋಗುವ ನೀರನ್ನು ತಡೆಯುವ ಎಚ್ಚರಿಕೆ ನೀಡಿದ್ದರು. ಉತ್ತರ ಪ್ರದೇಶದ ಭಾಗ್ಪತ್ನಲ್ಲಿ ಮಾತನಾಡಿದ್ದ ಅವರು, ಪುಲ್ವಾಮಾ ಉಗ್ರರ ದಾಳಿ ಬಳಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ 1960ರ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಗುಡುಗಿದ್ದರು.

ಭಾರತದ 3 ನದಿಗಳ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ನ್ಯಾಯಸಮ್ಮತವಾಗಿ ನಮಗೆ ಸಿಗುತ್ತಿದ್ದ ನೀರು ಪಾಕ್ ಪಾಲಾಗುತ್ತಿದೆ. ಈ ಹಿನ್ನೆಲೆ ಈ 3 ನದಿಗಳ ನೀರು ಯಮುನಾಗೆ ಹರಿಯುವಂತೆ ಯೋಜನೆಯೊಂದನ್ನು ಪರಿಕಲ್ಪನೆ ಮಾಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos