ರಫೇಲ್ ಒಪ್ಪಂದ: ಗೋಪ್ಯ ದಾಖಲೆ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ

ರಫೇಲ್ ಒಪ್ಪಂದ: ಗೋಪ್ಯ ದಾಖಲೆ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ, ಮಾ.14, ನ್ಯೂಸ್ ಎಕ್ಸ್ ಪ್ರೆಸ್:   ಈಚೆಗೆ ಸೋರಿಕೆಯಾದ ಗೋಪ್ಯ ದಾಖಲೆಗಳನ್ನು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ತೀರ್ಪಿನ ಮರುಪರಿಶೀಲನೆ ವೇಳೆ ಪರಿಗಣಿಸಬೇಕೇ ಎಂಬ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ.

ದಾಖಲೆಗಳನ್ನು ಪರಿಗಣಿಸುವುದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ಮೊದಲು ನಿರ್ಧಾರ ಕೈಗೊಳ್ಳಲಾಗುವುದು. ನಂತರ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಹೇಳಿದೆ.

ತೀರ್ಪು ಮರುಪರಿಶೀಲಿಸುವಂತೆ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು, ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

‘ಇವರು ಸಲ್ಲಿಸಿರುವ ದಾಖಲೆಗಳಲ್ಲಿ, ರಫೇಲ್ ಯುದ್ಧವಿಮಾನಗಳ ಯುದ್ಧ ಸಾಮರ್ಥ್ಯ ಕುರಿತ ವಿವರಗಳಿವೆ. ಸಾರ್ವಜನಿಕವಾಗಿ ಲಭ್ಯವಾಗುತ್ತಿರುವ ಈ ದಾಖಲೆಗಳು ಶತ್ರುಗಳಿಗೆ ದೊರಕುವ ಅಪಾಯ ಇದೆ’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿತ್ತು.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಗೋಪ್ಯ ದಾಖಲೆಗಳು ಕಳವಾಗಿವೆ. ಇವುಗಳನ್ನು ಮರುಪರಿಶೀಲನಾ ಅರ್ಜಿ ಜತೆ ಪರಿಗಣಿಸಬಾರದು ಎಂದು ಈಚೆಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಬಳಿಕ, ದಾಖಲೆಗಳು ಕಳವಾಗಿಲ್ಲ. ನಕಲು ಮಾಡಲಾಗಿದೆ ಎಂದು ಹೇಳಿತ್ತು.

ಫ್ರೆಶ್ ನ್ಯೂಸ್

Latest Posts

Featured Videos