ಭತ್ತ ಖರೀದಿ: ರೈಸ್‍ಮಿಲ್‍ಗಳ ಭದ್ರತಾ ಠೇವಣಿಗೆ ಪರ್ಯಾಯ ಉಪಾಯ ಅನುಸರಿಸಲು ಸಿಎಂ ಸಲಹೆ

ಭತ್ತ ಖರೀದಿ: ರೈಸ್‍ಮಿಲ್‍ಗಳ ಭದ್ರತಾ ಠೇವಣಿಗೆ ಪರ್ಯಾಯ ಉಪಾಯ ಅನುಸರಿಸಲು ಸಿಎಂ ಸಲಹೆ

ಬೆಂಗಳೂರು: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಅಕ್ಕಿ ಮಿಲ್‍ಗಳು ಠೇವಣಿ ಇಡುವುದಕ್ಕೆ ಪರ್ಯಾಯ ಉಪಾಯ ರೂಪಿಸುವ ಕುರಿತು ಕೂಡಲೇ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮಿಲ್ ಮಾಲೀಕರ ಪ್ರತಿನಿಧಿಗಳೊಂದಿಗೆ ಅವರು ಸಭೆ ನಡೆಸಿದರು.

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬದಲಿಸಿದ್ದು, ಇದರನ್ವಯ ರೈತರು ನೇರವಾಗಿ ಮಿಲ್ ಮಾಲೀಕರಿಗೆ ಭತ್ತ ನೀಡಬೇಕು. ಮಿಲ್‍ಗಳು ಭತ್ತದಿಂದ ಅಕ್ಕಿ ತಯಾರಿಸಿ, ಆಹಾರ್ ನಿಗಮದ ಮೂಲಕ ಅಕ್ಕಿ ಪೂರೈಸಬೇಕು. ಈ ವಿಧಾನದಲ್ಲಿ ದಾಸ್ತಾನು ಮಾಡುವ ರೈತರ ಭತ್ತಕ್ಕೆ ಭದ್ರತೆಯಾಗಿ ಮಿಲ್ ಮಾಲೀಕರು ಠೇವಣಿ ಇಡಬೇಕು ಎಂದು ಸೂಚಿಸಲಾಗಿದೆ. ಆದರೆ ಮಿಲ್ ಮಾಲೀಕರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಹೆಚ್ಚಿನ ಮಿಲ್ ಮಾಲೀಕರು ಭತ್ತ ಖರೀದಿಗೆ ತಮ್ಮ ಮಿಲ್‍ಅನ್ನು ನೋಂದಾಯಿಸಲು ಅಸಹಾಯಕರಾಗಿದ್ದು, ಇದರ ಬದಲಿಗೆ ಪರ್ಯಾಯವಾಗಿ ಆಸ್ತಿ ಅಡಮಾನ, ಪೋಸ್ಟ್ ಡೇಟೆಡ್ ಚೆಕ್ ಪಡೆಯುವುದು ಅಥವಾ ಇನ್ನಾವುದೇ ಮಾರ್ಗೋಪಾಯ ಸೂಚಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಇದಲ್ಲದೆ ಮಿಲ್ ಮಾಲೀಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ, ವಿಧಾನಸಭಾ ಸದಸ್ಯ ಸಿ.ಎನ್. ಬಾಲಕೃಷ್ಣ, ಆಹಾರ ಇಲಾಖೆಯ ಅಧಿಕಾರಿಗಳು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos