ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಕೆಪಿಆರೆಸ್ ವಿರೋಧ

ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಕೆಪಿಆರೆಸ್ ವಿರೋಧ

ಹಾಸನ, 4, ನ್ಯೂಸ್ಎಕ್ಸ್ ಪ್ರೆಸ್‍: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕಾಯ್ದೆ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ರೀತಿಯಲ್ಲೇ ರಾಜ್ಯ ಸಮ್ಮಿಶ್ರ ಸರ್ಕಾರ ಕೂಡ ಬಡವರಿಗೆ ಸಂಕಷ್ಟ ತಂದೊಡ್ಡುತ್ತಿದೆ. 2019ರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಪ್ರಕಾರ ರೈತರಿಗೆ ಯಾವುದೇ ಪರಿಹಾರ ನೀಡದೆ ಅಥವಾ ಕಡಿಮೆ ಹಣ ನೀಡಿ ಜಮೀನು ಪಡೆಯುವ ಅಧಿಕಾರ ಕಲ್ಪಿಸಿಕೊಳ್ಳಲಾಗಿದೆ. ಬಂಡವಾಳಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರೈತರ ಬಲಿ ಕೊಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫೆ.6ರಿಂದ 13ರವರೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಯಾವುದೇ ಚರ್ಚೆ ಮಾಡದೆ, ರೈತರ ಸಲಹೆ ಸೂಚನೆ ಪಡೆಯದೆ ಮಸೂದೆ ಅಂಗೀಕಾರ ಪಡೆದಿದೆ. ಸರ್ಕಾರದ ತಪ್ಪು ನಿರ್ಧಾರ ವಿರೋಧಿಸಬೇಕಿದ್ದ ವಿರೋಧ ಪಕ್ಷವೂ ಮುಖ್ಯಮಂತ್ರಿ ಗದ್ದುಗೆಗಾಗಿ ಬೇರೆ ಹೋರಾಟದಲ್ಲಿ ಮಗ್ನವಾಗಿದೆ. ಹೀಗಾದರೆ, ಅನಕ್ಷರಸ್ತ ರೈತರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದ ಆಹಾರ ಭದ್ರತೆ ಹಾಗೂ ಸ್ವಾವಲಂಬನೆ ಮೇಲಾಗುವ ದುಷ್ಪರಿಣಾಮ ಪರಿಗಣಿಸದೆ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಖಂಡನೀಯ. ಕೇಂದ್ರ ಸರ್ಕಾರ ಸಹ ಮೂರು ಬಾರಿ ಸುಗ್ರೀವಾಜ್ಞೆ ಮೂಲಕ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸಿದೆ. ರೈತ ವಿರೋಧಿ ನಿಲುವು ತಳೆಯಲು ಯಾವ ಸರ್ಕಾರಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭೂ ಸ್ವಾಧೀನ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಮನವಿ ಮಾಡಿದರು.

ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್‌ಕುಮಾರ್, ಕಾರ್ಯದರ್ಶಿ ವಸಂತಕುಮಾರ್, ತಾಲೂಕು ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಪ್ರಕಾಶ್, ಸಕಲೇಶಪುರ ತಾಲೂಕು ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಗಿಡ್ಡೇಗೌಡ, ಚನ್ನರಾಯಪಟ್ಟಣ ತಾಲೂಕು ಮುಖಂಡ ಎಚ್.ಎಸ್.ಮಂಜುನಾಥ್, ಅರಸೀಕೆರೆಯ ಹರೀಶ್, ಹೊನ್ನೇಗೌಡ, ಅಶೋಕ್, ಮಲ್ಲಿಕಾರ್ಜುನ್ ಹಾಗೂ ಇತರರು ಪ್ರತಿಭಟನೆಯಲ್ಲಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos