ಸರ್ಕಾರಕ್ಕೇ ದಂಡ ಒಳ್ಳೆಯ ಬೆಳವಣಿಗೆ ಅಲ್ಲ; ಡಾ.ಪರಮೇಶ್ವರ

  • In Metro
  • December 8, 2018
  • 266 Views
ಸರ್ಕಾರಕ್ಕೇ ದಂಡ ಒಳ್ಳೆಯ ಬೆಳವಣಿಗೆ ಅಲ್ಲ; ಡಾ.ಪರಮೇಶ್ವರ

ಬೆಂಗಳೂರು: “ಕೆರೆಗಳ ರಕ್ಷಣೆ ವಿಚಾರದಲ್ಲಿ ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ)ದ ಪರಿಮಿತಿಯನ್ನು ಪರಿಶೀಲಿಸಬೇಕಿದೆ’ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

ನಗರದ ನಿಸರ್ಗ ಭವನದಲ್ಲಿ ಶುಕ್ರವಾರ ಜಲ ಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿದ ತೀರ್ಪಿನ ಹಿಂದಿನ ಉದ್ದೇಶ ಒಳ್ಳೆಯದಿರಬಹುದು. ಆದರೆ, ಸರ್ಕಾರಕ್ಕೇ ದಂಡ ಹಾಕುವಂತಹದ್ದು ಉತ್ತಮ ಬೆಳವಣಿಗೆ ಅಲ್ಲ. ಅಷ್ಟಕ್ಕೂ ಸರ್ಕಾರ ಕೆರೆಗಳ ಸಂರಕ್ಷಣೆ ವಿಚಾರದಲ್ಲಿ ಕೈಕಟ್ಟಿ ಕುಳಿತಿಲ್ಲ. ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನ ನೀಡಿದ್ದು, ಪುನರುಜ್ಜೀವಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಆದೇಶ ಬೇಸರ ತಂದಿದೆ ಎಂದು ಹೇಳಿದರು.

ಯಾವ ಉದ್ದೇಶ ಮತ್ತು ಆಧಾರದ ಮೇಲೆ ಎನ್‌ಜಿಟಿ ಆದೇಶ ನೀಡಿದೆ? ಅದರ ಪರಿಮಿತಿಗಳು ಏನು? ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೆ ಎನ್ನುವುದು ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ತೀರ್ಪಿನ ಪ್ರತಿ ಕೈಸೇರಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದ ಡಾ.ಪರಮೇಶ್ವರ, ನ್ಯಾಯಾಧೀಕರಣ ಸೂಚಿಸಿದ ಪ್ರಕಾರ ತಿಂಗಳಲ್ಲಿ ಪರಿಹಾರ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.

ಬೆಳ್ಳಂದೂರು ಸೇರಿದಂತೆ ಕೆರೆಗಳು ಮಲೀನ ಆಗಿರುವುದು ಈಗ ಅಲ್ಲ; ಸುಮಾರು ದಿನಗಳಿಂದ ನಡೆಯುತ್ತಿದೆ. ಹಾಗೂ ಸ್ಥಳೀಯ ಸಂಸ್ಥೆಗಳ ಸಮನ್ವಯದ ಕೊರತೆಯಿಂದ ಮಾಲಿನ್ಯ ಹೆಚ್ಚುತ್ತಿಲ್ಲ. ಬದಲಿಗೆ ಸ್ಥಳೀಯ ನಿವಾಸಿಗಳು ಶುದ್ಧೀಕರಿಸದೆ, ನೀರನ್ನು ನೇರವಾಗಿ ಕೆರೆಗಳಿಗೆ ಬಿಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಜನ ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos