ನಮ್ಮ ಸರ್ಕಾರದ ಮೇಲೆ ಒಂದೂ ಭ್ರಷ್ಟಾಚಾರದ ಆರೋಪವಿಲ್ಲ: ಪಿಎಂ ಮೋದಿ

ನಮ್ಮ ಸರ್ಕಾರದ ಮೇಲೆ ಒಂದೂ ಭ್ರಷ್ಟಾಚಾರದ ಆರೋಪವಿಲ್ಲ: ಪಿಎಂ ಮೋದಿ

ನವದೆಹಲಿ:  ನಮ್ಮ ಸರ್ಕಾರದ ಮೇಲೆ ಒಂದೂ ಭ್ರಷ್ಟಾಚಾರದ ಆರೋಪ ಇರದಿರುವುದು ಇತಿಹಾಸ. ನಾವು ಗರ್ವ ಪಡಬೇಕು. ಇಡೀ ದೇಶ ಬಿಜೆಪಿಯತ್ತ ಕಣ್ಣು ನೆಟ್ಟಿದೆ ಎಂದು  ಪ್ರಧಾನಿ ಮೋದಿ  ಹೇಳಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಸಮರ್ಪಣಾ ಭಾವದ ಸೇವೆಯಿಂದ ಪಕ್ಷದ ಬೃಹತ್​ ಮರವಾಗಿದೆ. ಸ್ವಾಮಿ ವಿವೇಕಾನಂದರ ಜನುಮ ದಿನದಂದೇ ನಾವು ಸೇರಿರುವುದು ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರ ಸಂವಿಧಾನದ ಮೂಲಕ ಎಲ್ಲಾ ಬಡವರಿಗೂ ಮೀಸಲಾತಿ ನೀಡಲು ಅವಕಾಶ ಕಲ್ಪಿಸಿದ್ದೇವೆ. ಮೀಸಲು ನಿಮ್ಮ ಹಕ್ಕು, ಬಿಜೆಪಿ ಸರ್ಕಾರ ಅದನ್ನು ನಿಮಗೆ ನೀಡಿದೆ.  ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೇಲ್ವರ್ಗದ ಬಡವರಿಗೆ ಮೀಸಲು ಕಲ್ಪಿಸಿ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಸೌಲತ್ತುಗಳಿಂದ ಯಾರೂ ವಂಚಿತರಾಗಬಾರದು. ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಆದ್ಯತೆಯಾಗಿದೆ. ಆದ್ದರಿಂದ ನಮ್ಮ ಸರ್ಕಾರ ನ್ಯೂ ಇಂಡಿಯಾ ಮೂಲಕ ಯುವಕರಿಗೆ ಶಕ್ತಿ ತುಂಬಿದ್ದೇವೆ. ಯುವ ಜನತೆಯೊಂದಿಗೆ ನಮ್ಮ ಸರ್ಕಾರ ನಿಂತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಯುವಕರು ಮಿಂಚುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಹಿಳೆಯರ ಸಶಕ್ತೀರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಮೋದಿ ರಾಜಮಾತೆ ವಿಜಯರಾಜೇ ಸಿಂಧಿಯಾ ನೆನಪಿಸಿಕೊಂಡರು. ನಾವು ಬೇಟಿ ಪಡಾವೋ ಬೇಟಿ ಬಚಾವೋ  ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಹೆರಿಗೆ ರಜೆಯ ದಿನಗಳನ್ನ ಹೆಚ್ಚಿಸಿದ್ದೇವೆ. ಮೊದಲ ಬಾರಿಗೆ  ಮಹಿಳೆ ಸೇನೆಯಲ್ಲಿ ಅತ್ಯುನ್ನತ ಸ್ಥಾನಮಾನ ಪಡೆದಿದ್ದಾಳೆ  ಎಂದು ವಿವರಿಸಿದರು.

ದೇಶದ ರೈತರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ ವಿರೋಧಿಗಳು ಮತ ಬೇಟೆಗಾಗಿ ನಾನಾ ಆಮೀಷ ಒಡ್ಡುತ್ತಿದ್ದಾರೆ. ನಮ್ಮ ಸರ್ಕಾರ ತಾತ್ಕಾಲಿಕ ಪರಿಹಾರದಲ್ಲಿ ನಂಬಿಕೆ ಇಟ್ಟಿಲ್ಲ. ಬದಲಾಗಿ ದೀರ್ಘಕಾಲಿನ ಯೋಜನೆಗಳಲ್ಲಿ ನಂಬಿಕೆ ಇಟ್ಟಿದ್ದೇವೆ. ದೇಶದ ರೈತರು   ಬೆಳೆದ ಬೆಳೆಗೆ ಕನಿಷ್ಟ ಪ್ರೋತ್ಸಾಹ ಧನ ಹೆಚ್ಚಿಸಿದ್ದೇವೆ. ಸ್ವಾಮಿನಾಥನ್​ ಕಮಿಟಿ ಶಿಫಾರಸು ಜಾರಿ ಮಾಡಿದ್ದೇವೆ.  ಬೆಳೆಗೆ ಯೋಗ್ಯ ಬೆಲೆ ನೀಡಲು  ಸಹ ಸರ್ಕಾರ ಬದ್ಧವಾಗಿದೆ. ನಾನು ಯಾವತ್ತು ನನ್ನ ಹೆಸರಿನಿಂದ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ನಮಗೆ ನಮ್ಮ ಹೆಸರು ಇಟ್ಟುಕೊಳ್ಳುವ  ಅವಶ್ಯಕತೆ ಇಲ್ಲ ಎಂದು ಬೆನ್ನುತಟ್ಟಿಕೊಂಡಿದ್ದಾರೆ.

ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಎಂದು ಪುನರುಚ್ಛರಿಸಿದ ಮೋದಿ, ದೇಶದ ಪ್ರತಿಯೊಬ್ಬನ ವಿಕಾಸ್​ ಆಗಲೇಬೇಕು.. ಇದೇ ನಮ್ಮ ಸರ್ಕಾರದ ಗುರಿ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳನ್ನು ಕ್ಲರ್ಕ್​ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ದೇಶ ಪ್ರಬಲ ಸರ್ಕಾರವನ್ನು ಬಯಸುತ್ತಿದೆ.  ಯಾಕೆಂದರೆ ದೇಶದ ಸೇನೆಗೆ ಬಲ  ತುಂಬಬೇಕಿದೆ. ಆದರೆ ಕಾಂಗ್ರೆಸ್​ ದುರ್ಬಲ ಸರ್ಕಾರವನ್ನು ಬಯಸುತ್ತಿದೆ. ಯಾಕೆಂದರೆ ರೈತನ ಹೆಸರಿನಲ್ಲಿ ಲೂಟಿ ಮಾಡಲು. ನಾವು ಪ್ರಬಲ ಸರ್ಕಾರವನ್ನು ನೀಡುತ್ತೇವೆ. ಆ ಮೂಲಕ  ರೈತರ ಕೈಯನ್ನು ಬಲಪಡಿಸುತ್ತೇವೆ. ‘ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್’​ ಆಗಬೇಕು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos