ನಾಳೆ ಬಂದ್ ಇಲ್ಲ, ಮುಷ್ಕರ ಮಾತ್ರ: ಸಂಘಟನೆಗಳಿಂದ ಸ್ಪಷ್ಟನೆ

ನಾಳೆ ಬಂದ್ ಇಲ್ಲ, ಮುಷ್ಕರ ಮಾತ್ರ: ಸಂಘಟನೆಗಳಿಂದ ಸ್ಪಷ್ಟನೆ

ಹುಬ್ಬಳ್ಳಿ, ಜ. 07: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಜ. 8ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಇದು ‘ಭಾರತ್‌ ಬಂದ್‌’ ಎಂಬಂತೆ ಬಿಂಬಿತವಾಗುತ್ತಿದೆ. ಆದರೆ ಅಂದು ಬಂದ್‌ ಅಲ್ಲ, ಮುಷ್ಕರ ಮಾತ್ರ ನಡೆಯಲಿದೆ ಎಂದು ಸಂಘಟನೆಗಳ ಸ್ಪಷ್ಟಪಡಿಸಿವೆ. ಹೀಗಾಗಿ ಅವಳಿನಗರದಲ್ಲಿ ಬಸ್‌, ಆಟೊ, ಟ್ಯಾಕ್ಸಿ, ಸರಕು ಸಾಗಣೆ, ಬ್ಯಾಂಕಿಂಗ್‌ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಶಾಲೆ, ಕಾಲೇಜು, ಸರಕಾರಿ ಕಚೇರಿಗಳು ಕೂಡಾ ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತವೆ.

ದುಡಿಯುವ ಜನರ ಹಕ್ಕುಗಳನ್ನು ಸಂರಕ್ಷಿಸಿ, ಪರ್ಯಾಯ ಆರ್ಥಿಕ ನೀತಿಗಳನ್ನು ಜಾರಿಗೆ ತರಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ 21 ಸಾವಿರ ರೂ. ವೇತನ ನಿಗದಿ ಸೇರಿದಂತೆ ಒಟ್ಟು 13 ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳು ಮುಂದಿಟ್ಟಿವೆ. ಆದರೆ, ಬಂದ್‌ಗೆ ಕರೆ ಕೊಟ್ಟಿಲ್ಲ. ಎಲ್ಲೆಡೆ ಪ್ರತಿಭಟನೆಗಳನ್ನಷ್ಟೇ ಮಾಡಲಾಗುತ್ತಿದೆ.

ನಾಳೆ ಮುಷ್ಕರಕ್ಕೆ ಬೆಂಬಲಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌, ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಸೇಷನ್‌, ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆಗಳು ಸೇರಿದಂತೆ  ವಿವಿಧ ಸಂಘಟನೆಗಳು ಬೆಂಬಲಿಸಿ ಜ. 8 ರಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿಯೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸಲಿವೆ.

ಅಂದು ಹೊಸ ಕಾರ್ಮಿಕ ನೀತಿ ಬೇಡ ಶಿಕ್ಷಣದಲ್ಲಿ ಕೇಂದ್ರ ಸರಕಾರ ಖಾಸಗೀಕರಣ ತರಲು ಹೊರಟಿದ್ದು, ಯುಜಿಸಿ ಬದಲು ಎಚ್‌ಇಸಿಐ ಮಸೂದೆ ಜಾರಿ ಮಾಡಲು ಹೊರಟಿದೆ. ಅಲ್ಲದೇ, ಕಾರ್ಮಿಕ ನೀತಿ ತಿದ್ದುಪಡಿಸಿಗೊಳಿಸಿ ಹೊಸ ಕಾರ್ಮಿಕ ನೀತಿ ತರಲು ಯತ್ನಿಸುತ್ತಿರುವ ಕೇಂದ್ರ ಸರಕಾರದ ಧೋರಣೆ ಖಂಡನೀಯ. ಕೇಂದ್ರ ಸರಕಾರ ಮುಚ್ಚುತ್ತಿರುವ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಪ್ರೋತ್ಸಾಹ ನೀಡಬೇಕು. ಶ್ರಮಾ ಆಧಾರಿತ ಕೈಗಾರಿಕೆಗಳನ್ನು ತೆರೆಯಬೇಕು. ಖಾಯಂ ನೇಮಕಾತಿ ಮಾಡಬೇಕು. ಆಶಾ, ಅಂಗನವಾಡಿ ನೌಕರರನ್ನು ಸ್ಕೀಮ್‌ ವರ್ಕರ್‌ ಬದಲಾಗಿ ಕಾರ್ಮಿಕರೆಂದು ಪರಿಗಣಿಸಿ ಸೂಕ್ತ ವೇತನ ಕೊಡಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿಯ ಅಂಬೇಡ್ಕರ್‌ ವೃತ್ತದಿಂದ ಚನ್ನಮ್ಮ ವೃತ್ತದವರೆಗೂ ನೂರಾರು ಐಟಿಐ, ಆಶಾ ಕಾರ್ಯಕರ್ತರು, ಕಾರ್ಮಿಕರು ರ‍್ಯಾ‍ಲಿಯನ್ನ ನಡೆಸಿ ಚೆನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸುವರು. ಅದರಂತೆ ಧಾರವಾಡದಲ್ಲೂ ಕೂಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ರ‍್ಯಾ‍ಲಿಯನ್ನ ನಡೆಸಿ ಬಹಿರಂಗ ಸಭೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಇನ್ನೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು, ಆಟೋ, ಟ್ಯಾಕ್ಸಿ, ಮತ್ತು ಸರಕು ಸಾಗಣೆ ಚಾಲಕರು ಮತ್ತು ಮಾಲೀಕರ ಸಂಘಗಳು ಮುಷ್ಕರಕ್ಕೆ ಬಾಹ್ಯ ಬೆಂಬಲ ನೀಡಿವೆ. ಆದರೆ, ಸೇವೆ ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಕೆಎಸ್‌ಆರ್‌ಟಿಸಿ, ಆಟೊ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳು ಎಂದಿನಂತೆ ಸೇವೆ ಒದಗಿಸಲಿವೆ.

ಫ್ರೆಶ್ ನ್ಯೂಸ್

Latest Posts

Featured Videos