ಗ್ರಂಥಾಲಯಕ್ಕೆ ಬೇಕಿದೆ ಕಾಯಕಲ್ಪ

ಗ್ರಂಥಾಲಯಕ್ಕೆ ಬೇಕಿದೆ ಕಾಯಕಲ್ಪ

ಹುಳಿಯಾರು: ಸರ್ಕಾರಿ ಶಾಲೆಯ ಪುಟ್ಟ ಕೊಠಡಿಯಲ್ಲಿರುವ ಹುಳಿಯಾರಿನ ಸಾರ್ವಜನಿಕ ಗ್ರಂಥಾಲಯಕ್ಕೆ ಕಾಯಕಲ್ಪ ಬೇಕಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

ಹುಳಿಯಾರಿನ ರಾಮಹಾಲ್ ಮುಂಭಾಗದ ಪಂಚಾಯ್ತಿಯ ಕಟ್ಟಡದಲ್ಲಿ ೧೯೭೦ ರ ಹೊತ್ತಿಗೆ ಆರಂಭವಾದ ಸಾರ್ವಜನಿಕ ಗ್ರಂಥಾಲಯ, ನಂತರ ಹಳೆ ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ೧೯೯೩ ರಲ್ಲಿ ಪೇಟೆ ಬೀದಿಯ ಪಂಚಾಯ್ತಿ ಆವರಣದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ಚಟುವಟಿಕೆ ಆರಂಭಿಸಿತು.

ಕಳಪೆ ಕಟ್ಟಡದ ಪರಿಣಾಮ ಹತ್ತದಿನೈದು ವರ್ಷಕ್ಕಾಗಲೇ ಕಟ್ಟಡ ಶಿಥಿಲಾವಸ್ಥೆ ತಲುಪಿತು. ಮಳೆ ಬಂದರೆ ಕಟ್ಟಡದ ಒಳಗೆಲ್ಲ ಮಳೆ ನೀರು ಪುಸ್ತಕಗಳು ತೊಯ್ದು ಹಾಳಾದವು. ಈ ಬಗ್ಗೆ ಗ್ರಂಥಾಲಯ ಇಲಾಖೆಯ ಗಮನಕ್ಕೆ ತರಲಾಗಿ ಸರ್ಕಾರಿ ಶಾಲೆಯ ಕಟ್ಟಡಕ್ಕೆ ವರ್ಗಾಯಿಸಲಾಯಿತು.

ಶಾಲೆಯ ಕೊಠಡಿ ತೀರಾ ಸಣ್ಣದಾಗಿದ್ದು ಇರುವ ಪುಸ್ತಕಗಳನ್ನು ಜೋಡಿಸಲಾಗದೆ

ಅಲ್ಮೆರಾ ಮತ್ತು ಕಪಾಟುಗಳಲ್ಲಿ ಸೇರಿಕೊಳ್ಳುತ್ತಿವೆ. ಕೆಲವು ದುಬಾರಿ ಮೌಲ್ಯದ ಪುಸ್ತಕಗಳನ್ನು ಜೋಡಿಸಲು ಸ್ಥಳಾವಕಾಶ ಇಲ್ಲದೆ ಮೂಟೆ ಕಟ್ಟಿ ಇಡಲಾಗಿದೆ. ಅಲ್ಲದೆ ಪಪಂನಿಂದ ಇತ್ತೀಚೆಗಷ್ಟೆ ೨ ಲಕ್ಷ ರೂ. ಮೌಲ್ಯದ ಪುಸ್ತಕ ಖರೀದಿಸಿದ್ದರೂ ಸ್ಥಳವಕಾಶ ಕೊರತೆಯಿಂದ ಪುಸ್ತಕಗಳನ್ನೇ ಪಡೆಯದೆ ಪಂಚಾಯ್ತಿಯಲ್ಲೇ ಇಡಲಾಗಿದೆ.

ಪರಿಣಾಮ ಲಕ್ಷಾಂತರ ರೂ.ಗಳ ಸಾವಿರಾರು ಪುಸ್ತಕಗಳಿದ್ದರೂ ಓದುಗರಿಗೆ ಲಭ್ಯವಾಗುತ್ತಿಲ್ಲ. ಜತೆಗೆ ಗ್ರಂಥಾಲಯದಲ್ಲಿ ಮಕ್ಕಳಿಗೆ ಓದಲು ಅಗತ್ಯವಿರುವ ಯಾವುದೇ ಪುಸ್ತಕಗಳು ಸಿಗುತ್ತಿಲ್ಲ. ಮೊದಮೊದಲು ವಿದ್ಯಾರ್ಥಿಗಳು ಹಾಗೂ ನಾಗರಿಕರು ಪ್ರತಿ ದಿನ ಪತ್ರಿಕೆಗಳು ಮತ್ತು ಅಗತ್ಯವಿರುವ ಪುಸ್ತಕಗಳನ್ನು ಅಭ್ಯಾಸ ಮಾಡಲು ಬಂದರಾದರೂ ಸ್ಥಳವಿಲ್ಲದ ಕಾರಣ, ಪುಸ್ತಕ ಸಿಗದ ಕಾರಣ ಗ್ರಂಥಾಲಕ್ಕೆ ಬರುವುದನ್ನೇ ಕೈ ಬಿಟ್ಟರು. ಹಾಗಾಗಿ ನಿತ್ಯ ಓದುಗರ ಬರುವಿಕೆಗೆ ಕಾಯುವ ಪರಿಸ್ಥಿತಿ ಇಲ್ಲಿನ ಗ್ರಂಥಾಲಯಧಿಕಾರಿಗಳದ್ದಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos