ಮೈಸೂರು ಭಯೋತ್ಪಾದನಾ ನಿಗ್ರಹ ದಳ ರಚನೆ

ಮೈಸೂರು ಭಯೋತ್ಪಾದನಾ ನಿಗ್ರಹ ದಳ ರಚನೆ

ಮೈಸೂರು , ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನಾ ನಿಗ್ರಹ ದಳವನ್ನು ರಚಿಸಲಾಗಿದ್ದು, ಒಟ್ಟು 66 ಸಿಬ್ಬಂದಿ ಈ ತಂಡದಲ್ಲಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಎಸಿಪಿ ಎಂ.ಕೆ.ನಾಗರಾಜು ಮತ್ತು ಕೇಂದ್ರ ಮೀಸಲು ಪಡೆಯ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದಲ್ಲಿ 12 ಜನರ ಪ್ರಧಾನ ತಂಡವನ್ನು ರಚಿಸಲಾಗಿದೆ.

ಪ್ರತಿ ಠಾಣೆಯಲ್ಲೂ ಸಬ್ಇನ್ಸ್ಪೆಕ್ಟರ್ ಮತ್ತು ಸಹಾಯಕ ಸಬ್ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮುಖ್ಯ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಗಳನ್ನು ಒಳಗೊಂಡ ಪ್ರತ್ಯೇಕ ತಂಡಗಳು ಇರಲಿವೆ.

ಲೋಕಸಭಾ ಚುನಾವಣೆಯ ನಂತರ ಈ ತಂಡವನ್ನು ಭಯೋತ್ಪಾದನಾ ನಿಗ್ರಹದ ಉದ್ದೇಶಕ್ಕಾಗಿಯೇ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ತಿಳಿಸಿದರು.

ಭಯೋತ್ಪಾದಕರು ದಾಳಿ ನಡೆಸಿದರೆ ತಕ್ಷಣವೇ ಅದನ್ನು ನಿರ್ವಹಿಸುವ ಮಾರ್ಗೋಪಾಯಗಳನ್ನು ಈ ತಂಡವು ಕಂಡುಕೊಳ್ಳಲಿದೆ. ಇಂತಹ ದಾಳಿ ನಡೆಯದಂತೆ ಎಚ್ಚರಿಕೆ ವಹಿಸಿ ಮಾಹಿತಿ ಕಲೆ ಹಾಕುವುದೂ ತಂಡದ ಕೆಲಸವಾಗಿದೆ.

ಪ್ರವೀಣ್ ಸೂದ್ ನಗರ ಪೊಲೀಸ್ ಕಮಿಷನರ್ ಆಗಿದ್ದಾಗಲೂ ಭಯೋತ್ಪಾದನಾ ನಿಗ್ರಹ ದಳ ರಚಿಸಲಾಗಿತ್ತು. ಈ ವೇಳೆ ಪಾಕ್ ಮೂಲದ ಭಯೋತ್ಪಾದಕನೊಬ್ಬನನ್ನು ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಈ ತಂಡ ನಿಷ್ಕ್ರಿಯವಾಗಿತ್ತು. ಸದ್ಯ ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಮತ್ತೆ ಭಯೋತ್ಪಾದನಾ ನಿಗ್ರಹ ದಳ ರಚಿಸಿದ್ದಾರೆ.

ಕೆಲದಿನಗಳ ಹಿಂದಷ್ಟೇ ರಾಜ್ಯ ಪೊಲೀಸ್ ಮಹಾನಿರ್ದೇಶಕರರಾದ ನೀಲಮಣಿ ಎನ್.ರಾಜು ಮೈಸೂರು ಸೇರಿದಂತೆ ಇತರ ಕಮಿಷನರೇಟ್ ನಗರಗಳಲ್ಲೂ ಭಯೋತ್ಪಾದನಾ ನಿಗ್ರಹ ದಳ ರಚಿಸುವಂತೆ ಸೂಚಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos