ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಗುರಿ: ದೇವೇಗೌಡ

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಗುರಿ: ದೇವೇಗೌಡ

ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಲಗೊಳಿಸಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಗುರಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

‘ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಲವು ವರ್ಷಗಳಿಂದ ಬಿನ್ನಾಭಿಪ್ರಾಯಗಳಿವೆ, ಹೀಗಿದ್ದರೂ ನಾವು ಒಟ್ಟಾಗಿ ಸರಕಾರ ರಚಿಸಿದ್ದೇವೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವುದು ನಿಮ್ಮ ಸ್ವಂತ ಆಯ್ಕೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅಂತಹ ಪರಿಸ್ಥಿತಿಗಳು ಎದುರಾಗುವ ಪ್ರಶ್ನೆಯೇ ಇಲ್ಲ. ನನ್ನ ಬೇಡಿಕೆಗೆ ನಾನು ಅಂಟಿಕೊಂಡು ಕೂತಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದಷ್ಟೇ ಕಾಂಗ್ರೆಸ್ ಮತ್ತು ಜೆಡಿಎಸ್ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.

ನನಗೀಗ 86 ವರ್ಷ. ಹೀಗಾಗಿ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಆದರೆ ನನ್ನ ಕ್ಷೇತ್ರಕ್ಕೆ ಏನಾದರೊಂದು ಮಾಡಬೇಕು ಎಂಬ ಆಸೆಯಿದೆ, ಹೀಗಾಗಿ ಹಾಸನ ಕ್ಷೇತ್ರಕ್ಕೆ ನನ್ನ ಮೊಮ್ಮಗನ ಹೆಸರನ್ನು ಘೋಷಿಸಿದ್ದೇನೆ. ಆದರೆ, ಕೆಲವು ಮುಖಂಡರು ನಾನೇ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಈ ಬಗ್ಗೆ ನಾನು ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.

ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ಮುನ್ನ ಕಾಂಗ್ರೆಸ್ ನಿಮ್ಮನ್ನು ಸಂಪರ್ಕಿಸಿತ್ತೇ? ಎಂಬ ಪ್ರಶ್ನೆ ಉತ್ತರಿಸಿರುವ ಅವರು, ಮಂಡಳಿಗಳಿಗೆ ತಾತ್ಕಾಲಿಕವಾಗಿ ಹೆಸರುಗಳ ಬಗ್ಗೆ ಚರ್ಚಿಸಲಾಗಿತ್ತು, ಅವರು ಮಂಡಳಿಗಳಿಗೆ ಹೆಸರುಗಳನ್ನು ಘೋಷಿಸಿದರು, ಬಜೆಟ್ ನಲ್ಲಿ 16 ಸಾವಿರ ಕೋಟಿ ರೂ. ಅನುದಾನ ಸಿಗುವ ಮಂಡಳಿಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತ್ತು. ನಮಗೆ ಕೇವಲ ಮೂರು ಸಾವಿರ ಕೋಟಿ ರೂ. ಅನುದಾನ ಸಿಗುವ ಮಂಡಳಿಗಳನ್ನು ನೀಡಿತ್ತು, ಹೀಗಾಗಿ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಮುನ್ನ ಪಟ್ಟಿಯನ್ನು ತಿಳಿಸುವಂತೆ ನಾನು ಹೇಳಿದ್ದೆ, ಅದಾದ ನಂತರ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಹೇಳಿದ್ದಾರೆ.

ನನಗೆ ಯಾವುದೇ ರೀತಿಯ ರಾಜಕೀಯ ಆಸೆ-ಆಕಾಂಕ್ಷೆಗಳಿಲ್ಲ. ನನ್ನ ಪಕ್ಷ ಬೆಳೆಯುವುದಷ್ಟೆ ನನಗೆ ಮುಖ್ಯ, 545 ಮಂದಿ ಇರುವ ಮನೆಯಲ್ಲಿ ಕೇವಲ ಐದು ಅಥವಾ ಆರೋ ಸೀಟು ಪಡೆದ ನಾನ್ಯಾವ ಲೆಕ್ಕ? ಎಂದು ಪ್ರಶ್ನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos