‘ಋತುಮತಿಯಾದ ನಮ್ಮನ್ನೂ ಒಳಗೆ ಕರೆದು ಊಟ ಹಾಕಿದ್ದ ಸಿದ್ಧಗಂಗಾ ಶ್ರೀ’

‘ಋತುಮತಿಯಾದ ನಮ್ಮನ್ನೂ ಒಳಗೆ ಕರೆದು ಊಟ ಹಾಕಿದ್ದ ಸಿದ್ಧಗಂಗಾ ಶ್ರೀ’

ಮುಟ್ಟಾಗಿದ್ದಕ್ಕೆ ಹೆಮ್ಮೆಪಡಿ ಎಂದರು ಶಿವಕುಮಾರ ಸ್ವಾಮೀಜಿ!

ಬೆಂಗಳೂರು:  ಋತುಮತಿಯಾದ ಮಹಿಳೆಯರನ್ನು ಮೈಲಿಗೆ ಎಂಬಂತೆ ನೋಡುವ ಕಾಲದಲ್ಲೂ, ಮುಟ್ಟಾದ ಮಹಿಳೆಯರನ್ನು ಎಲ್ಲರೊಂದಿಗೇ ಕೂರಿಸಿ ಊಟ ಮಾಡುವುದಕ್ಕೆ ಅನುವು ಮಾಡಿಕೊಟ್ಟ ದಯಾಮಯಿ ಸಿದ್ದಗಂಗೆಯ ಶಿವಕುಮಾರ ಶ್ರೀಗಳು. ಅವರ ವ್ಯಕ್ತಿತ್ವದ ದ್ಯೋತಕವಾಗಿ ನಿಲ್ಲುವ ಅನುಭವವೊಂದನ್ನು ಸುಷ್ಮಾ ರಾವ್ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶತಾಯುಷಿ ಸಂತರಾದ ಶಿವಕುಮಾರ ಸ್ವಾಮೀಜಿ ಅವರ ಮಾದರಿ ವ್ಯಕ್ತಿತ್ವಕ್ಕೆ ಕನ್ನಡಿಯಾಗುವ ಆ ಘಟನೆಯನ್ನು ಸುಷ್ಮಾ ಅವರ ಮಾತಿನಲ್ಲೇ ಕೇಳಿ…

ಮರೆಯಲಾಗದ ಅನುಭವ “ನನಗಾಗ 13 ವರ್ಷ ವಯಸ್ಸು. ತುಮಕೂರಿನ ಶಿವಗಂಗೆಗೆ ಶಾಲಾ ಪ್ರವಾಸಕ್ಕೆಂದು ಹೋಗಿದ್ದೆವು. ಮಧ್ಯಾಹ್ನ ವಾಪಸ್ಸಾಗುವಾಗ ಊಟಕ್ಕೆಂದು ಸಿದ್ದಗಂಗಾ ಮಠಕ್ಕೆ ತೆರಳಿದ್ದೆವು.

ನಮ್ಮಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಊಟಕ್ಕೆ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಹಿರಿಯರೊಬ್ಬರು ಹೇಳಿದ್ದರು. ನಾವೆಲ್ಲ ಪ್ರತ್ಯೇಕ ಸ್ಥಳದಲ್ಲಿ ನಿಂತಿರುವಾಗಲೇ ನಮ್ಮತ್ತ ಹಿರಿಯರೊಬ್ಬರು ಧಾವಿಸಿ ಬಂದರು. ಕಾವಿ ಬಟ್ಟೆ ಧರಿಸಿದ್ದ ಅವರ ಸುತ್ತ ಮುತ್ತ ಕೆಲವು ಶಿಷ್ಯರಿದ್ದರು. ಅವರು ನಮ್ಮ ಬಳಿ ಬಂದು, ‘ಇಲ್ಯಾಕೆ ನಿಂತಿದ್ದೀರಿ?’ ಎಂದು ಪ್ರಶ್ನಿಸಿದರು. ನಾವು ಮುಜುಗರ ಪಟ್ಟುಕೊಂಡು, ‘ನಾವು ಮುಟ್ಟಾಗಿದ್ದೇವೆ. ಆದ್ದರಿಂದ ನಮಗೆ ಪ್ರತ್ಯೇಕವಾಗಿ ಬಡಿಸುವುದಾಗಿ ಹೇಳಿದರು’ ಎಂದೆವು.”

ಋತುಮತಿಯಾಗುವುದಕ್ಕೆ ಹೆಮ್ಮೆಪಡಿ ಎಂದರು ಶ್ರೀಗಳು!

“ಬಹಳ ಖೇದಗೊಂಡ ಆ ಹಿರಿಯರು, “ಇದೊಂದು ನೈಸರ್ಗಿಕ ಪ್ರಕ್ರಿಯೆ. ಅದಕ್ಕಾಗಿ ನಾಚಿಕೆ ಪಟ್ಟುಕೊಳ್ಳುವಂಥದ್ದು ಏನೂ ಇಲ್ಲ. ಅದಕ್ಕಾಗಿ ಪ್ರತ್ಯೇಕವಾಗಿ ಕೂರುವುದೂ ಬೇಕಿಲ್ಲ. ಬನ್ನಿ ಎಲ್ಲರೊಂದಿಗೆ ಊಟ ಮಾಡಿ. ಇದು ಪ್ರತೀ ಮಹಿಳೆಯೂ ಅನುಭವಿಸಬೇಕಾದ ಸಹಜ ಪ್ರಕ್ರಿಯೆ. ಅದಕ್ಕಾಗಿ ಬೇಸರ, ನಾಚಿಕೆ ಬೇಡ. ಹೆಮ್ಮೆಪಡಿ” ಎಂದು ನಮ್ಮನ್ನು ಎಲ್ಲರೊಂದಿಗೂ ಕೂರಸಿ ಊಟ ಮಾಡುವಂತೆ ಹೇಳಿದರು.”

ಶ್ರೀಗಳ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತ:

ಸುಷ್ಮಾ ರಾವ್ ಅವರು ಫೇಸ್ ಬುಕ್ ನಲ್ಲಿ ತಮ್ಮ ಅನುಭವವನ್ನು ಬರೆದುಕೊಳ್ಳುತ್ತಿದ್ದಂತೆಯೇ ನೂರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಗಳಿಗೆ ತಲೆಬಾಗಿದ್ದಾರೆ. 850 ಕ್ಕೂ ಹೆಚ್ಚು ಜನ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದರೆ, ಸುಮಾರು 250ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಶ್ರೀಗಳ ನಡೆಗೆ ನಾಡಿದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos