ಮುಂಗಾರು ದುರ್ಬಲ, ರೈತರು, ಜಾನುವಾರುಗಳು ತತ್ತರ..!

ಮುಂಗಾರು ದುರ್ಬಲ, ರೈತರು, ಜಾನುವಾರುಗಳು ತತ್ತರ..!

ಬೆಂಗಳೂರು, ಮೇ.22, ನ್ಯೂಸ್‍ ಎಕ್ಸ್‍ ಪ್ರೆಸ್‍: ಮುಂಗಾರು ಮಾರುತಗಳು ದುರ್ಬಲವಾಗಿರೋದ್ರಿಂದ ರಾಜ್ಯದಲ್ಲಿ 6 ರಿಂದ 8 ದಿನ ತಡವಾಗಿ ಮುಂಗಾರು ಆಗಮನ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಗಾರು ಮಳೆ ಕೇರಳ ಕರಾವಳಿ ಪ್ರವೇಶ ಮಾಡುವುದು ವಿಳಂಬವಾಗಬಹುದು. ವಾಡಿಕೆಯಂತೆ ಜೂನ್ 1ರ ವೇಳೆಗೆ ಕೇರಳವನ್ನು ಮುಂಗಾರು ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ನಾಲ್ಕರಿಂದ ಐದು ದಿನ ವಿಳಂಬವಾಗುವ ಸಾಧ್ಯತೆಗಳಿದ್ದರೆ ಜೂನ್ ಮೊದಲ ವಾರದಲ್ಲಿ ಕೇರಳ ತಲುಪಲಿದೆ. ಮುಂಗಾರು ಪ್ರಬಲವಾಗಿದ್ದರೆ ಒಂದೆರಡು ದಿನದಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತಿತ್ತು.

ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ?

ಕಳೆದ ಬಾರಿ ಮುಂಗಾರು ಆರಂಭದಲ್ಲೇ ಆರ್ಭಟಿಸಿ ಕೆಲವೆಡೆ ಅತಿವೃಷ್ಟಿಯೂ ಉಂಟಾಗಿತ್ತು. ಜಲಾಶಯಗಳಿಗೂ ಸಾಕಷ್ಟು ನೀರು ಹರಿದು ಬಂದಿತ್ತು. ಈ ಬಾರಿಯ ಹವಾಮಾನ ಮುನ್ಸೂಚನೆ ಪ್ರಕಾರ ಮುಂಗಾರು ತಡವಾಗಿ ಪ್ರವೇಶಿಸುತ್ತದೆ. ಕೊಡಗು, ದಕ್ಷಿಣ ಕನ್ನಡ, ಮಂಡ್ಯ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಾಗುವ ಸಾಧ್ಯತೆಗಳಿವೆ.

ಪರ್ಯಾಯ ಬೆಳೆ ಬೆಳೆಯಲು ಸೂಚನೆ

ಮುಂಗಾರು ಪೂರ್ವ ಮಳೆಯು ನಿರೀಕ್ಷಿತ ಪ್ರಮಾಣದಲ್ಲಿ ರಾಜ್ಯದಲ್ಲಿ ಬಂದಿಲ್ಲ. ಸತತ ಬರದ ಜೊತೆಗೆ ಮಳೆ ಕೊರತೆಯೂ ಸಂಕಷ್ಟವನ್ನು ಹೆಚ್ಚಿಸುತ್ತಿದೆ. ಈ ಬಾರಿ ಪೂರ್ವ ಮುಂಗಾರು ಶೇ.47ರಷ್ಟು ರಾಜ್ಯದಲ್ಲಿ ಕೊರತೆಯಾಗಿದೆ. ಮುಂಗಾರು ಮಾರುತಗಳು ಅಂಡಮಾನ್ ಬಳಿ ಸದ್ಯಕ್ಕಿದ್ದು, ಸರಿಯಾದ ಮಾರ್ಗದಲ್ಲೇ ಮುನ್ನಡೆಯುತ್ತಿವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಬಲವಾಗಿಲ್ಲದ ಕಾರಣ ಮುಂಗಾರು ಮಳೆ ಆರಂಭವೇ ದುರ್ಬಲವಾಗುವ ಸಾಧ್ಯತೆಗಳಿವೆ. ಹೀಗಾಗಿ ಕೃಷಿ ಹಾಗೂ ಹವಾಮಾನ ತಜ್ಞರು ಪರ್ಯಾಯ ಬೆಳೆ ಬೆಳೆಯುವಂತೆ ರೈತರಿಗೆ ಸೂಚನೆ ನೀಡಿದ್ದಾರೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos