ಮೂಲಭೂತ ಸೌಕರ್ಯ ವಂಚಿತ ದಲಿತ ಗ್ರಾಮ ಜೋಗಿಕೊಪ್ಪಲು

ಮೂಲಭೂತ ಸೌಕರ್ಯ ವಂಚಿತ ದಲಿತ ಗ್ರಾಮ ಜೋಗಿಕೊಪ್ಪಲು

 ಬೇಲೂರು, ನ. 16: ದಲಿತರು ವಾಸವಿರುವ ಗ್ರಾಮಗಳ ಅಭಿವೃದ್ಧಿಯೆ ನಮ್ಮ ಮೂಲ ಧ್ಯೇಯ ಎಂಬುದು ತಾಲೂಕಿನ ಜನಪ್ರತಿನಿಧಿಗಳ ವೇದವಾಕ್ಯವಾದರೂ ಇದಕ್ಕೆ ಅನುಗುಣವಾಗಿ ಇವರ ಕಾರ್ಯವೈಖರಿ ಇದೆಯೆ ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.

ತಾಲೂಕಿನ ಕುಶಾವರ ಗ್ರಾ.ಪಂ.ಯ ಚೌಡನಹಳ್ಳಕೊಪ್ಪಲು ಗ್ರಾಮದಲ್ಲಿ ಇರುವುದು 43 ದಲಿತ ಕುಟುಂಬಗಳು. ಪರಿಶಿಷ್ಟವರ್ಗದವರೆ ಸರಿಸುಮಾರು 280 ಜನ ಇಲ್ಲಿದ್ದಾರೆ. ಇವರೆಲ್ಲರ ಕಾಯಕ ಕೃಷಿ. ಎಲ್ಲೋ ಬೆರೆಳೆಣಿಕೆಷ್ಟು ಕುಟುಂಬ ಆರ್ಥಿಕವಾಗಿ ಉತ್ತಮವಾಗಿದ್ದರೂ ಉಳಿದವರ ಸ್ಥಿತಿ ಕಷ್ಟದ ಬದುಕು.

ದಲಿತರ ಉದ್ದಾರವೆ ನಮ್ಮ ಧ್ಯೇಯೋದ್ಧೇಶ ಎನ್ನುವುದಕ್ಕೆ ತತ್ವಿರುದ್ಧವಾಗಿರುವ ಇಲ್ಲಿನ ಜನರ ಬದುಕು ನಿಜಕ್ಕೂ ಶೋಚನೀಯ. ನಾಡ ಹೆಂಚಿನ, ಮಣ್ಣಿನ ಬಿರುಕುಬಿಟ್ಟ ಗೋಡೆಯ ಮನೆಗಳೆ ಇಲ್ಲಿ ಕಣ್ಣಿಗೆ ರಾಚುತ್ತವೆ. ಈ ಗ್ರಾಮದ ಪೂರ್ಣ ಪ್ರಮಾಣದ ಉಸಾಬರಿ ನಮಗೇಕೆ ಎನ್ನುವಂತೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಇದು ಒಳಗಾಗಿದೆ.

ಬೇಲೂರು-ಸಕಲೇಶಪುರ ರಾಜ್ಯ ಹೆದ್ದಾರಿಯಿಂದ 2 ಕಿ.ಮೀ.ದೂರದಲ್ಲಿರುವ ಈ ಗ್ರಾಮಕ್ಕೆ ಕೆರೆಯ ಏರಿಮೇಲೆ  ಬರಬೇಕೆಂದರೆ ಕೆಸರು ಗುಂಡಿಯ ರಸ್ತೆಯಲ್ಲೆ ಬರಬೇಕು. ಮಳೆ ಬಂದಾಗಲಂತೂ ದ್ವಿಚಕ್ರ ವಾಹನ ಸವಾರರ, ಪಾದಚಾರಿಗಳ ಸ್ಥಿತಿ ಅಯೋಮಯ. ಗ್ರಾಮದಿಂದ ರಾಜ್ಯ ಹೆದ್ದಾರಿ ತಲುಪವಷ್ಟರಲ್ಲಿ ತೊಟ್ಟ ಬಟ್ಟೆಯ ಬಣ್ಣ ಬದಲಾವಣೆ ಆಗಿರುತ್ತದೆ. ಮನೆಯಿಂದ ಬಂಧುಗಳ ಊರಿಗೋ, ಪಟ್ಟಣ ಪ್ರದೇಶಕ್ಕೆ ಹೋಗುವುದಾದರೆ ಎರಡು ಜತೆ ವಸ್ತ್ರ ತರಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದೊಳಗೆ ಒಂದು ಸಮರ್ಪಕ ರಸ್ತೆಯಿಲ್ಲ. ಚರಂಡಿಯಂತೂ ಕೇಳುವುದೆ ಬೇಡ. ಬಹಳ ವರ್ಷಗಳ ಹಿಂದೆ ನಿರ್ಮಿಸಿದ ಚಪ್ಪಡಿ ಚರಂಡಿ ಇದ್ದರೂ ಅದರಲ್ಲಿನ ಚಪ್ಪಡಿಗಳು ಕಿತ್ತುಹೋಗಿವೆ. ಚರಂಡಿಯ ನೀರು ಎಲ್ಲಿಬೇಕೊ ಅಲ್ಲಿ ಹರಿಯುತ್ತಿದೆ, ಕೆಲವಡೆ ಹರಿಯಲಾಗದೆ ನಿಂತು ಸೊಳ್ಳೆಗಳ ವಾಸಸ್ಥಾನವಾಗಿದೆ.

ರಸ್ತೆ ಇದ್ದರೂ ಸಮರ್ಪಕವಾಗಿಲ್ಲ. ಜಲ್ಲಿ ಕಂಡು ಅದೆಷ್ಟೋ ವರ್ಷಗಳಾಗಿದ್ದು, ಡಾಂಬರ್ ಎಲ್ಲಿಂದ ಬರಬೇಕು. ಬೀದಿ ದೀಪ ಯಾವಾಗಲೊಮ್ಮೆ ಮಿನುಗುತ್ತವೆ. ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಯಾವುದೆ ಸಂದರ್ಭ ಅಪಾಯತಂದೊಡ್ಡುವ ಸ್ಥಿತಿಯಿದೆ. ಕುಡಿಯುವ ನೀರಿಗೆ ತೊಂದರೆ ಇಲ್ಲದಿದ್ದರೂ ವ್ಯವಸ್ಥೆ ಹದಗೆಟ್ಟಿದೆ. ಕೊಳವೆ ಬಾವಿ ಸುತ್ತಮುತ್ತ ಗಲೀಜು ಮನೆಮಾಡಿದೆ. ಸೀಮೆಂಟ್ ಕಿತ್ತುಹೋಗಿದೆ. ಗ್ರಾಮದೊಳಗೆ ಸ್ವಚ್ಛಭಾರತ್ ಕನಸಿನ ವಿರುದ್ಧವಾದ ವಾತಾವರಣವಿದೆ.

ಗ್ರಾಮಸ್ಥರ ಹೇಳಿಕೆ

ಚುನಾವಣೆ ಬಂತೆಂದರೆ ಇಂದ್ರ, ಚಂದ್ರ ಎಂದುಕೊಂಡು ಬಂದು ತಬ್ಬಿಕೊಳ್ಳುತ್ತಾರೆ. ಏನೆಲ್ಲಾ ಭರವಸೆ ನೀಡುತ್ತಾರೆ. ನಂತರ ಯಾರೂ ಬರೊಲ್ಲ. ಲಿಂಗೇಶ್ ಅವರು ಎಂಎಲ್‍ಎ ಆದಮೇಲೆ ಒಂದೂ ಕೆಲಸ ಆಗಿಲ್ಲ. ನಾವೇನು ಓಟು ಹಾಕಿಲ್ವಾ? ಚುನಾವಣೆ ಮುಗಿದ ಮೇಲೆ ಅವರು ಜೋಗಿಕೊಪ್ಪಲು ನೋಡಿಯೆ ಇಲ್ಲ.  ಎಂದು ಧರ್ಮರಾಜ್ ಗ್ರಾಮಸ್ಥರು ತಿಳಿಸಿದ್ದಾರೆ.

ಇದೊಂದು ಕುಗ್ರಾಮದಂತೆ ಆಗಿದೆ. ಶಾಲೆಇಲ್ಲ, ಕನಿಷ್ಠ ಅಂಗನವಾಡಿಯೂ ಇಲ್ಲ, ಶಾಲೆಗೆ 2 ಕಿ.ಮೀ. ದೂರಕ್ಕೆ ಹೋಗಬೇಕಿದೆ. ಈ ಭಾಗದ ಮೆಂಬರ್ ನಾಮಕಾವಸ್ತೆ ಎಂಬಂತಾಗಿದೆ. ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದರೂ ಕ್ಯಾರೆ ಎನ್ನುತ್ತಿಲ್ಲ.

ನಾವು ದಲಿತರಲ್ವ ಅದಕ್ಕೆ ಈ ಮಲತಾಯಿ ಧೋರಣೆ ಎನ್ನದೆ ಮತ್ತೇನು. ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬಸವರಾಜು ಜೋಗಿಕೊಪ್ಪಲು ಗ್ರಾಮಸ್ಥರು ತಿಳಿಸಿದ್ದಾರೆ

ಅಧಿಕಾರಿ ಹೇಳಿಕೆ

ಜೋಗಿಕೊಪ್ಪಲಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿರುವುದು ಈಗ. ಸಮಸ್ಯೆ ಏನು ಎಂಬುದನ್ನು ಗ್ರಾಮಸ್ಥರು ತಿಳಿಸಿದರೆ ಗ್ರಾಮ ಸಭೆಯಲ್ಲಿ ಚರ್ಚಿಸಿ ಅಥವಾ ಪಂಚಾಯಿತಿ ಆಡಳಿತ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರವಿಕುಮಾರ್ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಬೇಲೂರು ಅವರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos