ಮೋದಿಯಿಂದ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಆಯೋಗ ಗರಂ

ಮೋದಿಯಿಂದ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಆಯೋಗ ಗರಂ

ಮಹಾರಾಷ್ಟ್ರ, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕೋಟ್ ಏರ್ ಸ್ಟ್ರೈಕ್ ಬಗ್ಗೆ ಮಾತನಾಡಿದ್ದು, ಚುನಾವಣಾ ಆಯೋಗದ ಕೆಂಗಣ್ಣಿಗೆ ಕಾರಣವಾದರೆ ಅಚ್ಚರಿಯಿಲ್ಲ! ಮಂಗಳವಾರ ಮಹಾರಾಷ್ಟ್ರದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, “ಈ ಸಲ ಮೊದಲ ಬಾರಿಗೆ ಮತಚಲಾಯಿಸುತ್ತಿರುವ ಮತದಾರರನ್ನು ಮನವಿ ಮಾಡಿದರು. ಈ ಸಂದರ್ಭದಲ್ಲಿ, “ನಿಮ್ಮ ಮೊದಲ ಮತವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನೀಡುವುದಿಲ್ಲವೇ?, ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ಮಾಡಿದ ವಾಯುಸೇನೆಗೆ ನೀಡುವುದಿಲ್ಲವೇ?” ಎಂದು ಪ್ರಶ್ನಿಸಿದರು. ಈ ಮೂಲಕ ಸೇನೆಯ ಪರಾಕ್ರಮವನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಲಾಗಿದ್ದು, ಈ ಕುರಿತು ಹೆಚ್ಚಿನ ವಿವರ ನೀಡಲು ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ. ಸಿಪಿಐಎಂ ಮುಖಂಡರೊಬ್ಬರು ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಜೊತೆಗೆ ಕಾಂಗ್ರೆಸ್ ವಕ್ತಾರ ಕಪಿಲ್ ಸೀಬಲ್ ಅವರೂ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಸೇನೆಯ ಸಾಧನೆಯನ್ನು ಪಕ್ಷ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಹೀಗೆ ಮಾಡುವಂತಿಲ್ಲ ಎಂದು ಮೊದಲೇ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಈ ಬಗ್ಗೆ ಆಯೋಗ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು” ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos