ಶ್ರೀಮತಿ ಶೆಟ್ಟಿ ಕೊಲೆ ಹಿಂದಿನ ರಹಸ್ಯವೇನು ಗೊತ್ತಾ?

ಶ್ರೀಮತಿ ಶೆಟ್ಟಿ ಕೊಲೆ ಹಿಂದಿನ ರಹಸ್ಯವೇನು ಗೊತ್ತಾ?

ಮಂಗಳೂರು, ಮೇ.15, ನ್ಯೂಸ್‍ ಎಕ್ಸ್ ಪ್ರೆಸ್‍: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35)ಯವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗಡುಕ ದಂಪತಿಯನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ಶ್ರೀಮತಿ ಶೆಟ್ಟಿಯವರು ಮಂಗಳೂರಿನಲ್ಲಿ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ವ್ಯವಹಾರ ಮಾಡುತ್ತಿದ್ದು, ಸಾಮಾನ್ಯ ಜೀವನ ನಡೆಸುತ್ತಿದ್ದರು. ಗಂಡನಿಂದ ವಿಚ್ಛೇದನ ಪಡೆದು ತಮ್ಮ ತಂದೆಯ ತಂಗಿ, ಸೋದರತ್ತೆಯೊಂದಿಗೆ ವಾಸಿಸುತ್ತಿದ್ದರು. ಶ್ರೀಮತಿ ಶೆಟ್ಟಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹದ ಭಾಗಗಳನ್ನು ಕತ್ತರಿಸಿ ಬಳಿಕ ರುಂಡ-ಮುಂಡ, ಕೈಕಾಲು ಪ್ರತ್ಯೇಕಿಸಿ ಕದ್ರಿ ಕೆಪಿಟಿ, ಕದ್ರಿ ಪಾರ್ಕ್, ನಂದಿಗುಡ್ಡ ಪರಿಸರದಲ್ಲಿ ಎಸೆದಿದ್ದರು.

 

ಹಣದ ವ್ಯವಹಾರವೇ ಮುಳುವಾಯ್ತಾ? 

ಬಂಧಿತರನ್ನು ವೆಲೆನ್ಸಿಯಾದ ಜೋನಸ್ ಜೂಲಿಸ್ ಸ್ಯಾಮ್ಸನ್ (36), ಆತನ ಪತ್ನಿ ವಿಕ್ಟೋರಿಯಾ (46) ಎಂದು ಗುರುತಿಸಲಾಗಿದ್ದು, ಹಣದ ವ್ಯವಹಾರ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ಜೋನಸ್ ಜ್ಯೂಲಿನ್ ಸ್ಯಾಮ್ಸನ್ ಶ್ರೀಮತಿ ಶೆಟ್ಟಿಯಿಂದ ಸಾಲ ರೂಪದಲ್ಲಿ 1 ಲಕ್ಷ ರೂಪಾಯಿ ಹಣಪಡೆದಿದ್ದ, ಸ್ವಲ್ಪ ಸಾಲವನ್ನ ಮರು ಪಾವತಿಸಿ 60 ಸಾವಿರ ರೂಪಾಯಿ ಹಣವನ್ನು ಬಾಕಿ ಇರಿಸಿದ್ದ ಎಂದು ಹೇಳಲಾಗಿದ್ದು, ಬಾಕಿ ಹಣವನ್ನು ಕೊಡುವಂತೆ ಜೊನಸ್ ಮನೆಗೆ ಹೋಗಿ ಶ್ರೀಮತಿ ಶೆಟ್ಟಿ ಕೇಳಿದ್ದರು. ದುಡ್ಡು ಕೊಡದಿದ್ದಕ್ಕೆ ಗಲಾಟೆ ಮಾಡುತ್ತಿದ್ದ ಶ್ರೀಮತಿ ಶೆಟ್ಟಿ ಕಳೆದ ಶನಿವಾರ ಬೆಳಗ್ಗೆ ಆರೋಪಿ ಮನೆಗೆ ಬಂದಿದ್ದ ಸಂದರ್ಭದಲ್ಲಿ ಆರೋಪಿ ಜಾನ್ಸನ್ ಮಾರಕಾಸ್ತ್ರಗಳಿದ ಶ್ರೀಮತಿ ಶೆಟ್ಟಿ ಅವರ ಮೇಲೆ ದಾಳಿ ನಡೆಸಿದ್ದ. ಮನೆಯಲ್ಲೇ ಶ್ರೀಮತಿ ಶೆಟ್ಟಿಯ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ದಾಳಿಯಲ್ಲಿ ಶ್ರೀಮತಿ ಶೆಟ್ಟಿ ಸ್ಥಳದಲ್ಲೇ ಮೃತ ಪಟ್ಟಿದ್ದರು.

 

ಕೊಲೆ ಕೃತ್ಯ ಬಯಲಾಗುವ ಭಯದಿಂದ ಜಾನ್ಸನ್ ಹಾಗೂ ಆತನ ಪತ್ನಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಗರದ ಹಲವೆಡೆ ಎಸೆದು ಬಂದಿದ್ದರು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಕೊಲೆ ಸಂದರ್ಭದಲ್ಲಿ ಶ್ರೀಮತಿ ಶೆಟ್ಟಿ ಧರಿಸಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದೇಹವನ್ನು ಬಿಸಾಕಲು ಆರೋಪಿಗಳ ಸ್ನೇಹಿತ ರಾಜು ಸಹಾಯ ಮಾಡಿದ್ದ.
ಇಡೀ ಜಿಲ್ಲೆಯನ್ನು ಬೆಚ್ಚಿಬಿಳಿಸಿದ್ದ ಈ ಕೊಲೆಯ ಆರೋಪಿಗಳನ್ನು ಬಂಧಿಸಲು ಅಧಿಕಾರಿ ಸಿಬ್ಬಂದಿ ಸೇರಿ ಮೂವತ್ತು ಮಂದಿಯ ಮೂರು ತಂಡ ರಚನೆ ಮಾಡಲಾಗಿತ್ತು. ಘಟನೆ ಬೆಳಕಿಗೆ ಬಂದ ಮೂರೇ ದಿನದಲ್ಲಿ ಪ್ರಕರಣ ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಆತ್ಮಹತ್ಯೆ ಯತ್ನ..!

ಆರೋಪಿ ಜೋನಸ್‍ನನ್ನು ಬಂಧಿಸಲು ತೆರಳುತ್ತಿದ್ದ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಸ್ತುತ ಫಾದರ್ ಮುಲ್ಲರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಂಧಿತ ಆರೋಪಿಗಳಿಂದ ದ್ವಿಚಕ್ರ ವಾಹನ, ಮೃತಳ ಎಂಟು ಚಿನ್ನದ ಉಂಗುರ, ಒಂದು ಚೈನ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಜೋನಸ್ ಮೇಲೆ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಇದ್ದು, 2010 ಜಾನ್ ಮೇರಿ ಮೆಂಡೋನಾ ಎಂಬವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.

ಫ್ರೆಶ್ ನ್ಯೂಸ್

Latest Posts

Featured Videos