ಮುಂಬೈ: ಭಾರತದ ಅತಿ ದೊಡ್ಡ ಇಂಡಿಯನ್ ಪ್ರೀಮಿಯರ್ ಆರಂಭವಾಗಿ ಎಲ್ಲಾ ತಂಡಗಳು ಎರಡೆರಡು ಪಂದ್ಯಗಳನ್ನು ಆಡಿದ್ದು. ಇಂದು 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಮುಖಿಯಾಗಲಿವೆ.
ಮುಂಬೈ ತಂಡದ ಸೋಲಿಗಿಂತಲೂ ಹೆಚ್ಚಾಗಿ ತಮ್ಮ ನಾಯ ಕತ್ವದ ವಿಚಾರದಲ್ಲಿ ಭಾರಿ ಟೀಕೆಗೊಳಗಾಗುತ್ತಿರುವ ಮುಂಬೈ ನಾಯಕ ಹಾರ್ದಿಕ್‌ಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಲಿದೆ. ಮುಂಬೈ ತಂಡ ಇಂದು ರಾಜಸ್ಥಾನ ವಿರುದ್ಧ ಸೆಣಸಾಡಲಿದ್ದು, ಹ್ಯಾಟ್ರಿಕ್ ಸೋಲು ತಪ್ಪಿಸಿ ಮೊದಲ ಗೆಲುವು ದಾಖಲಿಸಲು ಎದುರು ನೋಡುತ್ತಿದೆ. ಅತ್ತ ರಾಜಸ್ಥಾನ ಸತತ 3ನೇ ಗೆಲುವಿನ ಕಾತರದಲ್ಲಿದೆ.
ಆರಂಭಿಕ 2 ಪಂದ್ಯಗಳಲ್ಲಿ ತಂಡ ಎಲ್ಲಾ ವಿಭಾಗದಲ್ಲೂ ವಿಫಲವಾಗಿದ್ದು, ನಾಯಕತ್ವದ ವಿಚಾರದಲ್ಲೂ ತಂಡದಲ್ಲಿ ಬಣಗಳು ಸೃಷ್ಟಿಯಾಗಿರುವ ಬಗ್ಗೆ ವರದಿಯಾಗುತ್ತಿದೆ. ಹೀಗಾಗಿ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು, ಒಗ್ಗಟ್ಟಾಗಿ ಪಂದ್ಯ ಗೆಲ್ಲಬೇಕಾದ ಒತ್ತಡ ಮುಂಬೈಗಿದೆ. ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ಕಲೆಹಾಕಬೇಕಿದ್ದರೆ ರೋಹಿತ್ ಶರ್ಮಾ ಜತೆಗೆ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಜವಾಬ್ದಾರಿಯುತ ಆಟ ಆಡಬೇಕಿದೆ. ಇನ್ನೊಂದೆಡೆ ಅನುಭವಿ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಪೀಯೂಸ್ ಚಾವ್ಲಾ ಜತೆಗೆ ಗೆರಾಲ್ಡ್ ಕೋಟ್ಜೀ ಮಿಂಚಬೇಕಿದೆ
ಅತ್ತ ರಾಜಸ್ಥಾನ ತಂಡ ಲಖನ್ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದ್ದು, ಜಯದ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಯಶಸ್ವಿ ಜೈಸ್ವಾಲ್ ಒಳ್ಳೆಯ ಲಯದಲ್ಲಿದ್ದು, ಇಂದು ಜೋಸ್ ಬಟ್ಲರ್ ಕೂಡಾ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ. ಇದರ ಜತೆಗೆ ಸಂಜು ಸ್ಯಾಮ್ಸನ್ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದ್ದಾರೆ. ರಿಯಾನ್ ಪರಾಗ್ ಅವರ ಫಾರ್ಮ್ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸುವ ಸಾಧ್ಯತೆಯಿದೆ