ಇಂದು MI ಹಾಗೂ RCB ಮುಖಾಮುಖಿ

ಇಂದು MI ಹಾಗೂ RCB ಮುಖಾಮುಖಿ

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನ ಎಲಿಮಿನೇಟರ್ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವು ಈ ಸೀಸನ್​ನಲ್ಲಿ ಎರಡನೇ ಸ್ಥಾನ ಗಳಿಸಿದರೆ ಆರ್​ಸಿಬಿ ಮೂರನೇ ಸ್ಥಾನ ಗಳಿಸಿತು.

ಬುಧವಾರ ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ತಂಡ ಮತ್ತೊಮ್ಮೆ ಗೆದ್ದು ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಳೆದ ಸೀಸನ್​ನಲ್ಲಿಯೂ ಡೆಲ್ಲಿ ಮೊದಲು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಫೈನಲ್​ನಲ್ಲಿ ಮುಂಬೈ ಎದುರು ಸೋಲನುಭವಿಸಬೇಕಾಯಿತು.

ಇಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ಎರಡನೇ ಫೈನಲಿಸ್ಟ್ ಆಗಲು ತೀವ್ರ ಪೈಪೋಟಿ ನಡೆಯಲಿದೆ. ಮಂಧಾನ ತಂಡ ಈ ಸೀಸನ್​ನಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕರಲ್ಲಿ ಗೆಲುವಿನ ರುಚಿ ಕಂಡಿದೆ. ಅದೇ ಸಮಯದಲ್ಲಿ ಮುಂಬೈ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ಈ ಸೀಸನ್​ನಲ್ಲಿ ಎರಡು ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಒಂದು ಪಂದ್ಯವನ್ನು ಹರ್ಮನ್ಪ್ರೀತ್ ಕೌರ್ ತಂಡ ಗೆದ್ದುಕೊಂಡಿದ್ದರೆ, ಇನ್ನೊಂದು ಪಂದ್ಯವನ್ನು ಆರ್​ಸಿಬಿ ಗೆದ್ದಿದೆ. ಅದೇ ಸಮಯದಲ್ಲಿ, ಕಳೆದ ಸೀಸನ್‌ನಲ್ಲಿಯೂ ಎರಡು ತಂಡಗಳ ನಡುವೆ ಎರಡು ಲೀಗ್ ಪಂದ್ಯಗಳು ನಡೆದಿದ್ದು ಅದರಲ್ಲಿ ಮುಂಬೈ ಎರಡೂ ಪಂದ್ಯಗಳನ್ನು ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ನೋಡಿದರೆ ಮುಂಬೈ, ಆರ್​ಸಿಬಿ ವಿರುದ್ಧ ಮೇಲುಗೈ ಸಾಧಿಸಿದೆ ಎಂಬುದು ಸ್ಪಷ್ಟವಾಗುತ್ತದೆ.

ಮಾರ್ಚ್ 12ರಂದು ನಡೆದ 19ನೇ ಲೀಗ್ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ದಿಟ್ಟ ಪ್ರದರ್ಶನ ನೀಡಿ ಕೇವಲ 15 ರನ್‌ಗಳಿಗೆ ಆರು ವಿಕೆಟ್ ಪಡೆದರು. ಆ ಬಳಿಕ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿದ ಪೆರ್ರಿ ಅಜೇಯ 40 ರನ್ ದಾಖಲಿಸಿದರು. ಪೆರ್ರಿ ಅವರ ಈ ಆಲ್​ರೌಂಡರ್ ಪ್ರದರ್ಶನದಿಂದಾಗಿ ಮುಂಬೈ 19 ಓವರ್‌ಗಳಲ್ಲಿ 113 ರನ್‌ಗಳಿಗೆ ಕುಸಿಯಿತು. ಉತ್ತರವಾಗಿ ಆರ್‌ಸಿಬಿ 15 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 115 ರನ್ ಗಳಿಸಿ ಏಳು ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯದ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರ ಸ್ಮರಣೀಯ ಆಲ್‌ರೌಂಡ್ ಪ್ರದರ್ಶನದಿಂದಾಗಿ ಆರ್​ಸಿಬಿ ಪ್ಲೇಆಫ್‌ಗೆ ತಲುಪಿದೆ. ಎಲಿಮಿನೇಟರ್ ಪಂದ್ಯದಲ್ಲೂ ಮಹಿಳಾ ಆಟಗಾರ್ತಿಯರಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos