ಸದ್ದಿಲ್ಲದೆ ಬಂಡೆ ಹೊಡೆದು ಸುರಂಗ ತೋಡುತ್ತಿದೆ ಮೆಟ್ರೋ

ಸದ್ದಿಲ್ಲದೆ ಬಂಡೆ ಹೊಡೆದು ಸುರಂಗ ತೋಡುತ್ತಿದೆ ಮೆಟ್ರೋ

ಬೆಂಗಳೂರು, ನ. 05: ಮೆಟ್ರೋ ಎರಡನೇ ಹಂತದ ಯೋಜನೆಯ ಗೊಟ್ಟಿಗೆರೆ-ನಾಗವಾರ ನಡುವಿನ ಸುರಂಗ ನಿಲ್ದಾಣದ ನಿರ್ಮಾಣಕ್ಕಾಗಿ ಒಂದೂವರೆ ತಿಂಗಳಿಂದ ಸ್ಫೋಟ ಕಾರ್ಯ ನಡೆಯುತ್ತಿದೆ. ಆದರೆ, ಆ ಸ್ಫೋಟದ ಶಬ್ದ ಕೇವಲ 200-300 ಮೀಟರ್ ದೂರದಲ್ಲಿರುವ ನಿವಾಸಿಗಳಿಗೂ ಕೇಳುತ್ತಿಲ್ಲ. ಅಷ್ಟೇ ಅಲ್ಲ, ಅದರ ಪರಿಣಾಮವೂ ಯಾರಿಗೂ ಗೊತ್ತಾಗುತ್ತಿಲ್ಲ. ಕಾರಣ ಬೆಂಗಳೂರು ಮೆಟ್ರೋ ರೈಲು ನಿಗಮ ಅನುಸರಿಸುತ್ತಿರುವ ಅತ್ಯಾಧುನಿಕ ವಿಧಾನ.

ಟನೆಲ್ ಬೋರಿಂಗ್ ಮಷಿನ್ ನಿಂದ ಸುರಂಗ ಕೊರೆಯಲಾಗುತ್ತದೆ. 20 ಮೀಟರ್ ಆಳದ ನೂರಾರು ಮೀಟರ್ ಅಗಲದ ನಿಲ್ದಾಣವನ್ನು ನಿರ್ಮಿಸಲು ನೆಲವನ್ನು ದೊಡ್ಡ ಅಪ್ರಮಾಣದಲ್ಲಿ ಅಗೆಯಬೇಕಾಗುತ್ತದೆ. ಸಾಮಾನ್ಯವಾಗಿ ಎಸ್ಕವೇಟರ್‌ನಿಂದ ಈ ಕೆಲಸ ಮಾಡಬಹುದು. ಕಂಟ್ರೋನ್‌ಮೆಂಟ್ ಸುತ್ತಲಿನ ಭೂಮಿಯು ಗಟ್ಟಿ ಶಿಲೆಯಿಂದ ಕೂಡಿದ್ದು, ರಾಸಾಯನಿಕ ಅಂಶಗಳಿರುವ ಯಂತ್ರಗಳನ್ನು ಬಳಸಿ, ಬಂಡೆಗಳನ್ನು ಕತ್ತರಿಸಿ ಪುಡಿ ಮಾಡಬೇಕಾಗುತ್ತದೆ. ಇದಕ್ಕೆ ಕಂಟ್ರೋಲ್ ಬ್ಲಾಸ್ಟಿಂಗ್ ಅಂದರೆ ನಿಯಂತ್ರಿತ ಸ್ಫೋಟಕ ವಿಧಾನ ಎನ್ನುತ್ತಾರೆ.

ಸ್ಪೋಟದ ವಿದಾನ

ನಿರ್ದಿಷ್ಟ ಜಾಗದ ಶಿಲೆಯನ್ನು ಗುರುತಿಸಲಾಗುತ್ತದೆ. ಅದರ ಮೇಲೆ ನಿರ್ದಿಷ್ಟ ಅಂತರದಲ್ಲಿ 2 ಇಂಚು ಸುತ್ತಳತೆಯ ರೋಟರಿ ಡ್ರಿಲ್‌ನಿಂದ 30ಕ್ಕೂ ಅಧಿಕ ರಂಧ್ರಗಳನ್ನು ಕೊರೆಯಲಾಗುತ್ತದೆ. ಅವುಗಳಲ್ಲಿ 50-100 ಗ್ರಾಂ. ನಷ್ಟು ರಾಸಾಯನಿಕ ಅಂಶದಿಂದ ಕೂಡಿದ ಕ್ಯಾಪ್ಸುಲ್ ಗುಳಿಗೆ ಹಾಕಲಾಗುತ್ತದೆ. ಅದಕ್ಕೆ ಡೆಟೋನೇಟರ್ ಸಿಕ್ಕಿಸಿ, ಎಲೆಕ್ಟ್ರೀಕ್ ವೈರ್‌ಗಳನ್ನು ಜೋಡಿಸಲಾಗುತ್ತದೆ. ಅಲ್ಲಿಂದ ಸುಮಾರು 50 ಮೀಟರ್ ದೂರದಿಂದ ರಿಮೋಟ್ ಗುಂಡಿ ಒತ್ತಿ ಸ್ಪೋಟಿಸಲಾಗುತ್ತದೆ.

ಈ ಹಂತದಲ್ಲೇ ಸ್ಫೋಟಿಸಿದರೆ, 50 ಮೀಟರ್‌ನಷ್ಟು ಮೇಲೆ ಹಾಗೂ 200-300 ಮೀಟರ್‌ನಷ್ಟು ದೂರದಲ್ಲಿ ಕಲ್ಲಿನ ಚೂರುಗಳು ಸಿಡಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗುಳಿಗೆಗಳನ್ನು ತುಂಬಿದ ರಂಧ್ರಗಳ ಮೇಲೆ ಮರಳಿನ ಭಾರವಾದ ಚೀಲಗಳನ್ನು ಜೋಡಿಸಲಾಗುತ್ತದೆ. ಅದರ ಮೇಲೆ ಕಬ್ಬಿಣದ ಚೂರುಗಳು ಹೊರಬರದಂತೆ ಸಣ್ಣ ರಂಧ್ರಗಳಿಂದ ಕೂಡಿದ ಜಾಲರಿಯನ್ನು ಹೊದಿಸಲಾಗುತ್ತದೆ. ಆಮೇಲೆ ಅತ್ಯಂತ ಭಾರವಾದ ರಬ್ಬರ್ ಚಾಪೆ ಜೋಡಿಸಲಾಗುತ್ತದೆ. ಈ ರಬ್ಬರ್ ಚಾಪೆ ಎಷ್ಟು ಭಾರವಾಗಿರುತ್ತದೆ ಎಂದರೆ ಒಂದು ಚದರ ಮೀಟರ್ 300 ಕೆಜಿ ತೂಗುತ್ತದೆ! ಇದರಿಂದ ಶಬ್ಧ ಉಂಟಾಗುವುದಿಲ್ಲ ಎಂದು ತಂತ್ರಜ್ಞರೊಬ್ಬರು ತಿಳಿಸದ್ದಾರೆ.

ಕಂಪನಗಳ ಮಾಪನ

ಎಲ್ಲ 30 ರಂಧ್ರಗಳಿಂದ ಒಮ್ಮೆಲೆ ಸ್ಫೋಟಗೊಳ್ಳುವುದಿಲ್ಲ. ಪ್ರತಿ ಸ್ಫೋಟದ ನಡುವೆ 20 ಮಿಲಿ ಸೆಕೆಂಡ್ ಅಂತರ ಇರುತ್ತದೆ. ಅಲ್ಲದೆ, ಈ ಸ್ಫೋಟ ಕಾರ್ಯ ನಡೆಯುವ ಜಾಗದಿಂದ ಹತ್ತಿರ ಇರುವ ಎರಡು-ಮೂರು ಕಟ್ಟಡಗಳಲ್ಲಿ ಸಿಸ್ನೋಗ್ರಾಫ್ ಅಳವಡಿಸಲಾಗಿರುತ್ತದೆ. ಅದು ಭೂಕಂಪನವನ್ನು ಅಳೆಯುವ ರಿಕ್ಟರ್ ಮಾಪಕದ ಮಾದರಿಯಾಗಿದೆ.

ಸಾಂಪ್ರದಾಯಿಕ ವಿಧಾನ ಹಾನಿ

ಕಲ್ಲು ಕ್ವಾರಿಗಳಲ್ಲಿ ಅನುಸರಿಸುವ ಸಾಂಪ್ರದಾಯಿಕ ವಿಧಾನವನ್ನು ಇಲ್ಲಿ ಅನುಸರಿಸಲು ಬರುವುದಿಲ್ಲ. ಕಟ್ಟಡಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಹೆಚ್ಚು. ಜನನಿಬಿಡ ಪ್ರದೇಶಗಳಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಸ್ಫೋಟ ಕಾರ್ಯ ನಡೆಸುವುದು ಅಸಾಧ್ಯ. ಅರಣ್ಯ ಪ್ರದೇಶದಲ್ಲೂ ಈ ವಿಧಾನ ಅನುಸರಿಸದಂತೆ ನಿರ್ಬಂಧಿಸಲಾಗಿದೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಅವಕಾಶ ಇಲ್ಲ; ಅದು ಸೂಕ್ತವೂ ಅಲ್ಲ.

ಕಂಟ್ರೋನ್‌ಮೆಂಟ್‌ನಲ್ಲಿರುವ ಕಲ್ಲು ಅತ್ಯಂತ ಗಟ್ಟಿಯಾಗಿದೆ. ಅದನ್ನು ಸಾಮಾನ್ಯ ಸಿಮೆಂಟ್ ಕಾಂಕ್ರೀಟ್‌ಗೆ ಹೋಲಿಸುವುದಾದರೆ, ಒಂದು ಚದರ ಮೀಟರ್ ಸ್ಲಾಬ್‌ಗೆ 300 ಕೆಜಿ ಸಿಮೆಂಟ್ ಸಾಕಾಗುತ್ತದೆ. ಆದರೆ, ನಿರ್ಮಾಣ ಕಾರ್ಯ ನಡೆಯುತ್ತಿರು ಸ್ಥಳದಲ್ಲಿ ಇಷ್ಟೇ ಗಾತ್ರದ ಕಲ್ಲುಬಂಡೆ 1,750 ಕೆಜಿ ತೂಗುತ್ತದೆ ಎಂಬುದನ್ನು ಮೊದಲೇ ಅಂದಾಜಿಸಲಾಗುತ್ತದೆ.

ರಾಸಾಯನಿಕ ಸ್ಫೋಟ

ಇದರಲ್ಲಿ ನಿರಂತರ ಒಂದು ರಂಧ್ರ ಕೊರೆದು, ಸ್ಫೋಟಕಕ್ಕೆ ಪೂರಕವಾದ ಎರಡು-ಮೂರು ಪ್ರಕಾರದ ರಾಸಾಯನಿಕ ಅಂಶವನ್ನು ಆ ರಂಧ್ರದಲ್ಲಿ ಸುರಿಯಲಾಗುತ್ತದೆ. ಆ ಅಂಶವು ಬಂಡೆಯೊಳಗೆ ನಿಧಾನವಾಗಿ ವಿಸ್ತರಿಸುತ್ತಾ ಹೋಗುತ್ತದೆ. ಒಂದೆರಡು ದಿನಗಳಲ್ಲಿ ಬಂಡೆಯಲ್ಲಿ ಬಿರುಕುಗಳು ಉಂಟಾಗುತ್ತವೆ. ನಂತರ ಸುಲಭವಾಗಿ ಒಡೆದುಹಾಕಬಹುದು.

 

 

ಫ್ರೆಶ್ ನ್ಯೂಸ್

Latest Posts

Featured Videos