ಮೆಟ್ರೋ ನಿಲ್ದಾಣದಲ್ಲಿ ಶಂಕಾಸ್ಪದ ವ್ಯಕ್ತಿ: ಬಂಧನಕ್ಕೆ 3 ತಂಡ ರಚನೆ

ಮೆಟ್ರೋ ನಿಲ್ದಾಣದಲ್ಲಿ ಶಂಕಾಸ್ಪದ ವ್ಯಕ್ತಿ: ಬಂಧನಕ್ಕೆ 3 ತಂಡ ರಚನೆ

ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ನಗರದ ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣದಲ್ಲಿ ನೆನ್ನೆ ರಾತ್ರಿ 7.30ರ ಸಮಯದಲ್ಲಿ ಸುಮಾರು 40ರ ಆಸುಪಾಸಿನ ವ್ಯಕ್ತಿಯೊಬ್ಬ  ಮೆಟ್ರೋ ನಿಲ್ದಾಣ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಶಂಕಾಸ್ಪದ ವಸ್ತುವನ್ನು ಇಟ್ಟುಕೊಂಡಿದ್ದು, ಪತ್ತೆಯಾಗಿದೆ. ಅನುಮಾನಗೊಂಡ ಸಿಬ್ಬಂದಿ ಈ ಬಗ್ಗೆ ಆತನಲ್ಲಿ ಪ್ರಶ್ನೆ ಮಾಡಿದಾಗ ಆತ ನಿಲ್ದಾಣದಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಈ ಘಟನೆ ನಂತರ ಎಚ್ಚೆತ್ತ ಭದ್ರತಾ ಸಿಬ್ಬಂದಿ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ನೆನ್ನೆ ಸಂಜೆ ಸುಮಾರು 7.30ರ ಸಮಯದಲ್ಲಿ ವ್ಯಕ್ತಿಯೊಬ್ಬ ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣ ಪ್ರವೇಶ ದ್ವಾರದ ಬಳಿ ಬಂದಿದ್ದಾನೆ. ಈ ವೇಳೆ ಲೋಹ ಪರಿಶೋಧಕ (ಮೆಟಲ್​ ಡಿಟೆಕ್ಟರ್) ಯಂತ್ರದ ಮೂಲಕ ಒಳಬರುವವರನ್ನು ಸಿಬ್ಬಂದಿ ತಪಾಸಣೆ ಮಾಡುವಂತೆ ಈತನನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಶಂಕಿತ ವ್ಯಕ್ತಿಯ ಸೊಂಟದ ಭಾಗದಲ್ಲಿ ಶಂಕಾಸ್ಪದ ವಸ್ತು ಇರುವುದು ಡಿಟೆಕ್ಟರ್​ನಿಂದ ಪತ್ತೆಯಾಗಿದೆ. ಆತನನ್ನು ತಡೆದ ಸಿಬ್ಬಂದಿ ಮತ್ತೆ ಪರೀಕ್ಷಿಸಿದ್ದಾರೆ. ಈ ವೇಳೆಯೂ ಶಬ್ದ ಬಂದಿದೆ. ಅರೆಬಿಕ್​ ಶೈಲಿಯಲ್ಲಿ ವೇಷಭೂಷಣ ತೊಟ್ಟಿದ್ದ ಶಂಕಿತ ವ್ಯಕ್ತಿ ನಂತರ ತಾನು ಹಾಕಿದ್ದ ಕಂದೂರ್​ (ಉದ್ದವಾದ ಶರ್ಟ್)​ ಎತ್ತಿ ತೋರಿಸಲು ಮುಂದಾಗಿದ್ದಾನೆ. ನಂತರ ಕೆಲ ಸೆಕೆಂಡುಗಳಲ್ಲಿ ಅಲ್ಲಿಂದ ಹೊರಹೋಗಿದ್ದಾನೆ. ಬಳಿಕ ಅಲ್ಲಿಂದ ಒಳನುಗ್ಗಿ ಆತ ಗೇಟ್​ ಹಾರಿ ಒಳ ಹೋಗಲು ಯತ್ನಿಸಿದ್ದಾನೆ‌. ಆದರೆ ಸಿಬ್ಬಂದಿ ಬಿಟ್ಟಿಲ್ಲ. ಆಗ ಒಳಗೆ ಬಿಟ್ಟರೆ ಒಂದು ಕೋಟಿ ಕೊಡುವ ಆಮಿಷವನ್ನೂ ಒಡ್ಡಿದ್ದಾನೆ ಎನ್ನಲಾಗಿದೆ. ಅಷ್ಟರಲ್ಲಿ ಆ ಸಿಬ್ಬಂದಿ‌ ವಿಷಯವನ್ನು ಮುಖ್ಯ ಭದ್ರತಾಧಿಕಾರಿ ಗಮನಕ್ಕೆ ತಂದಿದ್ದಾರೆ. ಅವರು ಬರುವ ಹೊತ್ತಿಗೆ ಆತ ಪರಾರಿಯಾಗಿದ್ದಾನೆ. ಆ ಶಂಕಿತ ವ್ಯಕ್ತಿ ಹಿಂದಿ ಮಾತನಾಡುತ್ತಿದ್ದ ಎಂದು ಮೆಟ್ರೋ ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ. ಈ ಬಗ್ಗೆ ಮಾತನಾಡಿದ ಡಿಸಿಪಿ ರವಿ ಡಿ ಚನ್ನಣ್ಣನವರ್, ​ಅನಾಮಧೇಯ ವ್ಯಕ್ತಿ ಹುಡುಕಾಟಕ್ಕೆ ಎಸಿಪಿ ಮಹಾಂತ್​ ರೆಡ್ಡಿ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸಿಸಿ ಟಿವಿ ದೃಶ್ಯಾವಳಿ ಸಂಗ್ರಹಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಆ ವ್ಯಕ್ತಿ ಯಾರು, ಎಲ್ಲಿಂದ ಬಂದಿದ್ದಾನೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಶೀಘ್ರದಲ್ಲೇ ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಲಾಗುವುದು. ಸಾರ್ವಜನಿಕರು ಊಹಾಪೋಹಗಳಿಗೆ ಕಿವಿಗೊಡದೆ, ಧೈರ್ಯದಿಂದ ಇರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಘಟನೆಯಿಂದಾಗಿ ಮೆಟ್ರೋ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ರಾತ್ರಿಯೇ ಡಿಸಿಪಿ ಚನ್ನಣ್ಣನವರ್ ಬಂದು ಪರಿಶೀಲನೆ ನಡೆಸಿ ವಾಪಸ್ಸಾಗಿದ್ದಾರೆ. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದವರು ಮೆಟ್ರೋ ನಿಲ್ದಾಣದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಮೆಟ್ರೋ ನಿಲ್ದಾಣದಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಶಂಕಿತ ವ್ಯಕ್ತಿಯ ಸಂಪೂರ್ಣ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಬಾಂಬ್​ ಸ್ಪೋಟದ ಬಳಿಕ ದೇಶದಲ್ಲೂ ಎಲ್ಲೆಡೆ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಏತನ್ಮಧ್ಯೆ ಶಂಕಿತ ಉಗ್ರನೊಬ್ಬ ಬೆಂಗಳೂರಿಗೆ ಬಂದಿದ್ದಾನೆ ಎಂಬ ವದಂತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಅನಾಮಧೇಯ ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದೊಳಗೆ ಶಂಕಾಸ್ಪದ ವಸ್ತು ಇಟ್ಟುಕೊಂಡು ಒಳಪ್ರವೇಶಿಸಲು ಯತ್ನಿಸಿರುವುದು ಹಲವು ಅನುಮಾನಗಳ ಜೊತೆಗೆ ಆತಂಕವನ್ನು ಸೃಷ್ಟಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos