ಕಸದಿಂದ ವಿದ್ಯುತ್ ಉತ್ಪಾದನೆಗೆ ಮಾಸ್ಟರ್ ಪ್ಲಾನ್

ಕಸದಿಂದ ವಿದ್ಯುತ್ ಉತ್ಪಾದನೆಗೆ ಮಾಸ್ಟರ್ ಪ್ಲಾನ್

ಬೆಂಗಳೂರು, ಅ. 21: ನಗರದ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ.

ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ ಉಚಿತ ಕಸವನ್ನು ನೀಡುವ ತೀರ್ಮಾನಕ್ಕೆ ಬಂದಿದೆ. ಸೆ 21 ರಂದು ಕಸ ವಿಲೇವಾರಿ ಸಮಸ್ಯೆ ಕುರಿತಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಬಿಎಸ್ವೈ ಸೂಚನೆ ನೀಡಿದ್ದಾರೆ. ನಗರದ ಕಸವನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವಾಗಿದ್ದು ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೆ.21 ರಂದು ಮದ್ಯಾಹ್ನ ಸಭೆ ನಡೆಸಿದರು. ಸಭೆಯಲ್ಲಿ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ ಮೋಹನ್ ಹಾಗೂ ಮಹಾನಗರ ಪಾಲಿಕೆ ಮೇಯರ್ ಗೌತಮ್ ಭಾಗಿಯಾಗಿದ್ದರು.

ಬಿಬಿಎಂಪಿಯಿಂದ ಕಸ ವಿಲೇವಾರಿ ವೈಜ್ಞಾನಿಕವಾಗಿ ವಿಲೇವಾರಿ ಆಗದಿರುವ ಕುರಿತು ಶಾಸಕರಿಂದ ಮುಖ್ಯಮಂತ್ರಿಗಳಿಗೆ ಈ ವೇಳೆ ಮನವಿ ಸಲ್ಲಿಸಲಾಯಿತು. ಪ್ರಮುಖವಾಗಿ ಕಣ್ಣೂರಿನ ಕಸದಿಂದ ಊರಿನ ಕೊಳವೆ ಬಾವಿಗಳ ಅಂತರ್ ಜಲ ಮತ್ತು ನೀರು ಕಲುಷಿತ ಆಗುತ್ತಿರುವ ಕುರಿತಾಗಿ ಕಣ್ಣೂರು ಗ್ರಾಮಸ್ಥರು ಸಿಎಂ ಬಿಎಸ್‌ವೈಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಿಎಂ ಕಣ್ಣೂರು ಗ್ರಾಮದ ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡುವಂತೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್‌ಗೆ ಸೂಚನೆ ನೀಡಿದರು. ಅಲ್ಲದೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವಂತೆ ಕಮಿಷನರ್‌ಗೆ ಸೂಚನೆ ನೀಡಿದ ಅವರು ಇದಕ್ಕೋಸ್ಕರ 500 ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಡುವ ನಿರ್ಧಾರಕ್ಕೆ ಬರಲಾಗಿದೆ. ಪಾಲಿಕೆಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಕುರಿತಾಗಿಯೂ ಚರ್ಚೆ ನಡೆದಿದ್ದು, ಈ ಬಗ್ಗೆ ಗಮನ ಹರಿಸುವಂತೆ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಡೂರು ಪ್ರದೇಶದ ಕಸವನ್ನು ಅಲ್ಲಿಯೇ ಕರಗಿಸಿ ವಿದ್ಯುತ್ ಉತ್ಪಾದನೆಗೆ ಬಳಸುವಂತೆ ಸೂಚನೆ ನೀಡಿದರು.

ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಕಂಪನಿಗಳು ಮುಂದೆ ಬಂದರೆ ಉಚಿತವಾಗಿ ಕಸವನ್ನು ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ನಗರದ ಕಸದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಇನ್ನು ಮುಂದೆ ವಾರಕ್ಕೆ ಒಮ್ಮೆ ಸಭೆ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.

 

 

ಫ್ರೆಶ್ ನ್ಯೂಸ್

Latest Posts

Featured Videos