ವಾಹನ ದಟ್ಟಣೆ ನಿವಾರಣೆಗೆ ಮಾರ್ಷೆಲ್

ವಾಹನ ದಟ್ಟಣೆ ನಿವಾರಣೆಗೆ ಮಾರ್ಷೆಲ್

ಬೆಂಗಳೂರು, ನ. 21: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಸ್ ಆದ್ಯತಾ ಪಥ ಯೋಜನೆಯನ್ನು ಬಿಬಿಎಂಪಿ, ಬಿಎಂಟಿಸಿ ಹಾಗೂ ಸಂಚಾರ ಪೊಲೀಸರ ಸಹಯೋಗದಲ್ಲಿ ರೂಪಿಸಲಾಗಿತ್ತು. ಯೋಜನೆ ಅನುಷ್ಠಾನಕ್ಕೆ ಹಲವು ತೊಡಕುಗಳಿವೆ. ಬೋಲ್ಲಾರ್ಡ್ ಅಳವಡಿಕೆ, ಹಳದಿ ಬಣ್ಣದ ಗುರುತು ಹಾಕಿದ ಹೊರತಾಗಿಯೂ ಆದ್ಯತಾ ಪಥದಲ್ಲಿ ಬಸ್‌ಗಳು ಮಾತ್ರ ಸಂಚಾರ ಮಾಡುವುಂತೆ ನೋಡಿಕೊಳ್ಳುವುದು ಸಂಚಾರ ಪೊಲೀಸರಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಸಂಚಾರ ಪೊಲೀಸರು ನೆರವು ಕೇಳಿದ್ದು, ಇಲ್ಲೂ ಮಾರ್ಷಲ್‌ಗಳನ್ನು ನೇಮಕ ಮಾಡಲು ಬಿಬಿಎಂಪಿ ಮುಂದಾಗಿದೆ.

ಸಿಲ್ಕ್ಬೋರ್ಡ್ನಿಂದ ಕೆ.ಆರ್.ಪುರದವರೆಗೆ ಉದ್ದೇಶಿತ ಬಸ್ ಆದ್ಯತಾ ಪಥ ಯೋಜನೆ ಅನುಷ್ಠಾನ ಸಂಚಾರ ಪೊಲೀಸರಿಗೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನಾ ಮಾರ್ಗದಲ್ಲಿ ಪ್ರತಿ ಕಿ.ಮೀಗೆ ಒಬ್ಬರು ಮಾರ್ಷಲ್‌ರಂತೆ ಒಟ್ಟು 8೦ ಜನ ಮಾರ್ಷಲ್‌ಗಳನ್ನು ನೇಮಕ ಮಾಡಲು ಬಿಬಿಎಂಪಿ ಮುಂದಾಗಿದೆ.

ಸಂಚಾರ ಪೊಲೀಸ್ ವಿಭಾಗ, ಬಿಎಂಟಿಸಿ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಿರ್ಮಿಸಲಾಗಿರುವ ಪಥದಲ್ಲಿ ಒಂದೆಡೆ ಸಾರ್ವಜನಿಕರ ಅಸಹಕಾರ. ಮತ್ತೂಂದೆಡೆ ವೈಜ್ಞಾನಿಕವಾಗಿ ನಿರ್ಮಾಣಗೊಳ್ಳದ ಪಥದ ನಿರ್ವಹಣೆಯಲ್ಲಿ ಗೊಂದಲ ಉಂಟಾಗಿತ್ತು. ಯೊಜನೆಗೆ ಸಂಚಾರ ಪೊಲೀಸರ ಕೊರತೆಯೂ ಇದೆ ಎಂದು ಸಂಚಾರ ಪೊಲೀಸರು ಹೇಳಿದ ಮೇಲೆ ಮಾರ್ಷಲ್‌ಗಳ ನೆರವು ನೀಡಲು ಪಾಲಿಕೆ ಮುಂದಾಗಿದೆ.

13 ಕಿ.ಮೀ. ಉದ್ದದ 12 ಮೀಟರ್ (ಅಗಲ) ರಸ್ತೆಯ ಪೈಕಿ 3.5 ಮೀಟರ್ ರಸ್ತೆಯನ್ನು ಆದ್ಯತಾ ಪಥಕ್ಕೆ ಬಳಸಲಾಗಿದೆ. ಆರಂಭಿಕವಾಗಿ ಆರು-ಏಳು ಕಿ.ಮೀ. ರಸ್ತೆಯಲ್ಲಿ ಕನಿಷ್ಠ ಎರಡೂವರೆ ಅಡಿಗೆ ಒಂದರತೆ ನೂರಾರು ಕಬ್ಬಿಣದ ಬೋಲ್ಲಾರ್ಡ್, ಕ್ಯಾಟ್ ಐಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದುದರಿಂದ ಸಾರ್ವಜನಿಕರೇ ನೇರವಾಗಿ ಬಿಬಿಎಂಪಿಗೆ ದೂರು ನೀಡಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಷ್ಟೇ ಬೋಲ್ಲಾರ್ಡ್ ತೆರವುಗೊಳಿಸಲಾಗಿದ್ದು, ಮಾರ್ಗದುದ್ದಕ್ಕೂ ಹಳದಿ ಬಣ್ಣದಲ್ಲಿ ಎರಡು ಸಾಲುಗಳನ್ನು ಎಳೆಯಲಾಗಿದೆ. ಜತೆಗೆ ಬಸ್ ನಿಲ್ದಾಣಗಳ ಮುಂಭಾಗ (ಬಸ್ ನಿಲ್ಲುವ ಸ್ಥಳ) ಕೆಂಪು ಬಣ್ಣ ಲೇಪನ ಮಾಡಲಾಗಿದೆ.

ಆರ್ಥಿಕ ಹೊರೆಯ ಎಚ್ಚರಿಕೆ

ಆದ್ಯತಾ ಪಥದ ಯೋಜನೆಗೆ ಮಾರ್ಷಲ್‌ಗಳ ನೇಮಕ ಮಾಡಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳ ನಡೆಯನ್ನು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಟೀಕಿಸಿದ್ದು, ಮಾರ್ಷಲ್‌ಗಳನ್ನು ನೇಮಕ ಮಾಡಲು ಬಿಬಿಎಂಪಿಯಿಂದ ಹಣ ನೀಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.ಸಿಬ್ಬಂದಿಗಳನ್ನು ನೇಮಿಸುವ ಅಗತ್ಯವಿದ್ದರೆ ಸಂಚಾರ ಪೊಲೀಸರು ಅಥವಾ ಬಿಎಂಟಿಸಿಯಿಂದ ನೇಮಕ ಮಾಡಲಿ ಬಿಬಿಎಂಪಿ ಏಕೆ ಸಿಬ್ಬಂದಿ ನೇಮಿಸಬೇಕು. ಇದೇ ರೀತಿ ಎಲ್ಲದಕ್ಕೂ ಮಾರ್ಷಲ್‌ಗಳನ್ನು ನೇಮಿಸಿದರೆ ಬಿಬಿಎಂಪಿಗೆ ಆರ್ಥಿಕ ಹೊರೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos