ಕೋಲಾರದಲ್ಲಿ ಕಾಂಗ್ರೆಸ್-ಬಿಜೆಪಿ ‘ಮಣ್ಣಿನ ಮಕ್ಕಳ’ ಗದ್ದಲ!

ಕೋಲಾರದಲ್ಲಿ ಕಾಂಗ್ರೆಸ್-ಬಿಜೆಪಿ ‘ಮಣ್ಣಿನ ಮಕ್ಕಳ’ ಗದ್ದಲ!

ಕೋಲಾರ, ಏ. 1, ನ್ಯೂಸ್ ಎಕ್ಸ್ ಪ್ರೆಸ್: ಅವರಿಬ್ಬರಲ್ಲಿ ಒಬ್ಬರು ಪಕ್ಕಾ ರಾಜಕಾರಣಿ, ಮತ್ತೊಬ್ಬರು ರಿಯಲ್ ಎಸ್ಟೇಟ್ ಉದ್ಯಮಿ. ಆದ್ರೆ ಈಗ ದಿಢೀರ್​ ಅಂತಾ ಮಣ್ಣಿನ ಮಕ್ಕಳಾಗಿದ್ದಾರೆ. ಮಂಡ್ಯದಲ್ಲಿ ಜೋಡೆತ್ತು ಫೈಟ್ ನಡುವೆ ಕೋಲಾರದಲ್ಲಿ ಮಣ್ಣಿನ ಮಕ್ಕಳ ಪೈಪೋಟಿ ಶುರುವಾಗಿದೆ. ಕೋಲಾರ ಲೋಕಸಭೆ ಚುನಾವಣಾ ಕಣ ರಂಗೇರಿದ್ದು, ಕಣದಲ್ಲಿರುವ ಕಾಂಗ್ರೆಸ್​​ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಮಾತಿನ ಸಮರ ಶುರುವಾಗಿದೆ. ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತುಗಳನ್ನ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿ ಇನ್ನೇನು ಪಕ್ಷಗಳಲ್ಲಿರುವ ಬಂಡಾಯ ನಾಯಕರನ್ನ ಮಾತನಾಡಿಸುತ್ತಾ, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಈ ಮಧ್ಯೆ ಮತದಾರರನ್ನ ಸೆಳೆಯುವ ನಿಟ್ಟಿನಲ್ಲಿ ಮಾತಿನ ಭರದಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ತಾವೂ ರೈತರು ಅನ್ನುತ್ತಿದ್ದಾರೆ.

ಸದ್ಯ ಕೋಲಾರ ಜಿಲ್ಲೆಯಲ್ಲಿ ಎದ್ದಿರುವ ಪ್ರಶ್ನೆ ಒಂದೇ. ಇವರೆಲ್ಲಾ ರೈತರಾಗಿದ್ದು ಯಾವಾಗ ಅನ್ನೋದು. ಇಷ್ಟು ದಿನ ರಾಜ್ಯದಲ್ಲಿ ಮಾತ್ರ ಸದ್ದು ಮಾಡುತ್ತಿದ್ದ ಮಣ್ಣಿನ ಮಕ್ಕಳ ಹವಾ ಈಗ ಕೋಲಾರಕ್ಕೂ ಕಾಲಿರಿಸಿದೆ. ಕಾಂಗ್ರೆಸ್​​ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ಗ್ರಾಮದವರು. ಕಳೆದ ಮೂವತ್ತು ವರ್ಷಗಳಿಂದ ಎಲ್ಲರಿಗೂ ತಿಳಿದಂತೆ ರಾಜಕಾರಣ ಮಾಡಿಕೊಂಡು ಬಂದಿರುವವರು. ಅದಕ್ಕೂ ಮೊದಲು ವಕೀಲರಾಗಿ ಕೆಲಸ ಮಾಡುತ್ತಿದ್ದವರು. ಆದ್ರೆ 8ನೇ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಮುನಿಯಪ್ಪ, ನಾನೊಬ್ಬ ರೈತ. ನಾಲ್ಕೈದು ಕೊಳವೆ ಬಾವಿ ಕೊರೆಸಿ ವಿಫಲವಾದ ಬಳಿಕ ತೋಟಗಾರಿಕೆ ಬೆಳೆಗಳನ್ನ ಹಾಕಿದ್ದೇನೆ. ನೀರಿಲ್ಲದ ಕಾರಣ ರೇಷ್ಮೆ ತೆಗೆದು ಸಪೋಟ, ಸೀಬೆಕಾಯಿ ಗಿಡಗಳನ್ನ ಹಾಕಿದ್ದೇನೆ. ರೈತರ ಕಷ್ಟಗಳು ನನಗೆ ಗೊತ್ತಿದೆ ಎನ್ನುವ ಮೂಲಕ ನಾನೊಬ್ಬ ಮಣ್ಣಿನ ಮಗ ಎನ್ನುತ್ತಿದ್ದಾರೆ.

ಇನ್ನು ಸಂಸದ ಮುನಿಯಪ್ಪ ಮಾತ್ರವಲ್ಲ ಬಿಬಿಎಂಪಿ ಸದಸ್ಯರಾಗಿ, ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಂಡಿರುವ ಸದ್ಯ ಕೋಲಾರ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಕೂಡ ತಾನು ರೈತ ಎಂದು ಹೇಳಿಕೊಳ್ಳುತ್ತಿದ್ದಾರೆ. ಮಾಲೂರು ತಾಲೂಕು ಟೇಕಲ್​ ಹೋಬಳಿ ಯಲುವಗುಳಿ ಗ್ರಾಮದಲ್ಲಿ ಜನಿಸಿರುವ ನಾನೂ ಕೂಡ ಕೋಲಾರದ ಮಣ್ಣಿನ ಮಗ. ನಾನು ರೈತ. ಕಳೆದ ಹಲವು ವರ್ಷಗಳಿಂದ ಕೋಲಾರದಲ್ಲೇ ಟೊಮ್ಯಾಟೋ ಬೆಳೆಯುತ್ತಿದ್ದೇನೆ. ಬಾಕ್ಸ್ ಟೊಮ್ಯಾಟೋ 120 ರಿಂದ 350ರವರೆಗೆ ಹೋಗುತ್ತಿದೆ. ಈಗಲೂ ಹತ್ತಾರು ಎಕರೆಯಲ್ಲಿ ಬೆಳೆದ ಟೊಮ್ಯಾಟೋ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹಾಕುತ್ತಿದ್ದೇನೆ ಎನ್ನುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos