ಬೆಂಗಳೂರಿಗೆ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ: ಕೃಷ್ಣಭೈರೇಗೌಡ

ಬೆಂಗಳೂರಿಗೆ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ: ಕೃಷ್ಣಭೈರೇಗೌಡ

ನವದೆಹಲಿ, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆ ಹಾಗೂ ಇಂದು ಮತಬೇಟೆ ನಡೆಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಬೆಂಗಳೂರಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಗುಡುಗಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ನಿನ್ನೆ ಕೆ ಆರ್ ಪುರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಕ್ಯಾಲಸನಹಳ್ಳಿಯಿಂದ ಆರಂಭವಾದ ಬೈಕ್ ರಾಲಿಗೆ ಕಾರ್ಯಕರ್ತರು ಹೂವಿನ ಮಳೆಗೈದು ಕೃಷ್ಣಬೈರೇಗೌಡ ಅವರನ್ನು ಸ್ವಾಗತಿಸಿದರು. ಇಂದು ಬೆಳ್ಳಂಬೆಳಗ್ಗೆ ಪಾರ್ಕ್ ಗಳಿಗೆ ತೆರಳಿ ವಾಕಿಂಗ್ ಬಂದವರ ಬಳಿ ತಮ್ಮ ಪರ ಓಟ್ ಮಾಡುವಂತೆ ಮನವಿ ಮಾಡಿದ್ರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿನ ವಿವಿಧ ಉದ್ಯಾನಗಳಿಗೆ ತೆರಳಿ ವಾಕಿಂಗ್ ಗೆ ಆಗಮಿಸಿದ್ದ ಸಾರ್ವಜನಿಕರಿಗೆ ಮತ ನೀಡುವಂತೆ ಮನವಿ ಮಾಡಿದರು. ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬೆಂಗಳೂರನಲ್ಲಿ ಸಾಫ್ಟ್‌ವೇರ್ ರಫ್ತು ಒಂದರಿಂದಲೇ 80 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟಾದರೂ ಬೆಂಗಳೂರು ಅಭಿವೃದ್ಧಿಗೆ ಕೇಂದ್ರದಿಂದ ಸೂಕ್ತ ನೆರವು ಸಿಗುತ್ತಿಲ್ಲ. ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉದ್ದೇಶಿಸಿರುವ ಫೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಹಣಕಾಸು ನೆರವು ಕೋರಿದರೂ ಬಿಡಿಗಾಸು ಕೊಟ್ಟಿಲ್ಲ. ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೂ ರಾಜ್ಯ ಸರ್ಕಾರವೇ ಆರು ಸಾವಿರ ಕೋಟಿ ರೂಪಾಯಿ ನೀಡಿದೆ. ಈ ಯೋಜನೆಗೆ ನೆರವು ಕೋರಿ ಹಲವು ಬಾರಿ ಸಂಪರ್ಕಿಸಿದರೂ ಕೇಂದ್ರದಿಂದ ಯಾವುದೇ ಪ್ರಯೋಜನ ಸಿಕ್ಕಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿನ ಬರ ನಿರ್ವಹಣೆಗೆ ಸಹಾಯ ಕೇಳಿದಾಗಲೂ ಕೇಂದ್ರ ಇದೇ ರೀತಿ ವರ್ತಿಸಿದೆ. ಮಹಾರಾಷ್ಟ್ರಕ್ಕೆ 4700 ಕೋಟಿ ರೂಪಾಯಿ ನೆರವು ನೀಡುವ ಕೇಂದ್ರ ಬಿಜೆಪಿ ಸರ್ಕಾರ, ಕರ್ನಾಟಕಕ್ಕೆ ಬರೀ 949 ಕೋಟಿ ರೂ. ನೀಡಿದೆ. ಇನ್ನು, ನರೇಗಾ ಯೋಜನೆಗೆ ಕೊಡಬೇಕಿರುವ ಎರಡೂವರೆ ಸಾವಿರ ಕೋಟಿ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ. ಈ ಹಣ ಬಿಡುಗಡೆ ಮಾಡಿಸಿಕೊಳ್ಳಲು ಸದಾನಂದಗೌಡರು ಸೇರಿದಂತೆ ಹಲವು ನಾಯಕರ ನಿಯೋಗವನ್ನು ಕರೆದುಕೊಂಡು ಹೋಗಿದ್ದೆವು. ಆಗ ಕೇಂದ್ರ ಸರ್ಕಾರ 200 ಕೋಟಿಯನ್ನಷ್ಟೇ ಕೊಟ್ಟಿದೆ. ಇದನ್ನೇ ಸದಾನಂದಗೌಡರು ಪ್ರಚಾರದಲ್ಲಿ ಹೇಳಿಕೊಂಡು ಬರುತ್ತಿದ್ದಾರೆ. ಈ ನಡುವೆ ಜನ ಗುಳೆ ಹೋಗುವುದನ್ನು ತಪ್ಪಿಸಲು ರಾಜ್ಯದ ಖಜಾನೆಯಿಂದ 650 ಕೋಟಿ ಸಾಲ ಪಡೆದಿದ್ದೇವೆ. ಇವರು ಕೊಡಬೇಕಾದ ಹಣಕ್ಕೆ ನಾವು ಸಾಲ ಮಾಡುವಂತಾಗಿದೆ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ರಾಜ್ಯ ಲೋಕಸಭೆಗೆ ಅತಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಟ್ಟಿದೆ. ಆದರೆ ರಾಜ್ಯದ ಬಿಜೆಪಿ ಸಂಸದರು ನಮ್ಮ ನಾಡಿನ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಇವರೆಲ್ಲ ತಮ್ಮ ವೈಯಕ್ತಿಕ ಹಿತಕ್ಕಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತಾಡುವುದಕ್ಕೇ ಭಯಪಡುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು. ನಾನು ಇದೇ ಭಾಗದ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಬೆಂಗಳೂರು ಸಮಸ್ಯೆಗಳನ್ನು ಅರಿತಿದ್ದೇನೆ. ನಗರದ ಉತ್ತರ ಭಾಗದಲ್ಲಿ ಮೆಟ್ರೋ ರೈಲು ವಿಸ್ತರಿಸುವ ಯೋಜನೆ ಇದೆ. ಹೆಬ್ಬಾಳದಲ್ಲಿ ನಾಲ್ಕು ಪಥದ ಫ್ಲೈಓವರ್ ನಿರ್ಮಿಸುತ್ತಿದ್ದೇವೆ. ಫ್ಲೈಓವರ್ ನಿರ್ಮಾಣವಾದರೆ ಹೆಬ್ಬಾಳದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ. ಹೀಗಾಗಿ ತನಗೆ ಮತ ನೀಡಿ ಗೆಲ್ಲಿಸಿ ಮನವಿ ಮಾಡಿದರು. ಜತೆಗೆ ಸದಾನಂದಗೌಡರು ಕ್ಷೇತ್ರಕ್ಕೆ ಬಾರದಿರುವುದನ್ನು ಪ್ರಸ್ತಾಪಿಸಿ ನಿಮಗೆ ಆಬ್ಸೆಂಟ್ ಅಭ್ಯರ್ಥಿ ಬೇಕೋ ಅಥವಾ ಆ್ಯಕ್ಟೀವ್ ಅಭ್ಯರ್ಥಿ ಬೇಕೋ ನೀವೆ ನಿರ್ಧರಿಸಿ ಎಂದು ಕೃಷ್ಣ ಬೈರೇಗೌಡ ಆಯ್ಕೆಯನ್ನ ಮತದಾರರಿಗೆ ಬಿಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos