ಕಮಲದಲ್ಲಿ ಒಳ ಒಳಗೆ ಚರ್ಚೆ!

ಕಮಲದಲ್ಲಿ ಒಳ ಒಳಗೆ ಚರ್ಚೆ!

ಬೆಂಗಳೂರು, ಜು . 2: ರಾಜ್ಯದ ಸಮ್ಮಿಶ್ರ ಸರ್ಕಾರ ಕೊನೆಗೂ ಅಂತ್ಯ ಕಂಡಿದೆ. ಹೀಗಾಗಿ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ಇದ್ದರೂ ಕೇಂದ್ರದ ನಾಯಕರು ಸರ್ಕಾರ ರಚಿಸಲು ಮೀನಾಮೇಷ ಏಣಿಸುತ್ತಿದ್ದಾರೆ. 113 ಮ್ಯಾಜಿಕ್ ನಂಬರ್ ಇಲ್ಲದೆ ರಾಜ್ಯದಲ್ಲಿ ಸರ್ಕಾರ ರಚಿಸಿದರೂ ಭವಿಷ್ಯದಲ್ಲಿ ಸರ್ಕಾರ ಸ್ಥಿರವಾಗಿರುತ್ತದೆ ಎಂಬ ನಂಬಿಕೆ ಸ್ವತಃ ಬಿಜೆಪಿ ನಾಯಕರಿಗೇ ಇಲ್ಲ. ಇದೇ ಕಾರಣಕ್ಕೆ ಸರ್ಕಾರ ರಚನೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ಸರ್ಕಾರ ರಚನೆಯಾಗುವ ಮುನ್ನವೇ ಸ್ಪೀಕರ್ ಯಾರು? ಎಂಬ ಕುತೂಹಲಕಾರಿ ಚರ್ಚೆ ಇದೀಗ ಕಮಲ ಪಾಳಯದಲ್ಲಿ ಜೋರಾಗಿದೆ.

ಬಿಜೆಪಿ ಸರ್ಕಾರ ರಚಿಸಿದರೆ ಸ್ಪೀಕರ್ ಯಾರು? ಇದು ಕಳೆದ ಎರಡು ಮೂರು ದಿನಗಳಿಂದ ಬಿಜೆಪಿ ಪಾಳಯದಲ್ಲಿ ಆಗಾಗ್ಗೆ ಎಡತಾಕುತ್ತಿರುವ, ಚರ್ಚೆಗೆ ಗ್ರಾಸವಾಗುತ್ತಿರುವ ಪ್ರಶ್ನೆ. ಬಿಜೆಪಿ ಮೂಲಗಳ ಪ್ರಕಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸುರೇಶ್ ಕುಮಾರ್ ಹೆಸರು ಸ್ಪೀಕರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನವೇ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಅನುಭವಿ. ಅಲ್ಲದೆ ಬಿಜೆಪಿ ಪಕ್ಷದ ಉತ್ತರ ಕರ್ನಾಟಕ ಭಾಗದ ಹಿರಿಯ ರಾಜಕಾರಣಿ. ಇವರಿಗೆ ಸಿಎಂ ಸಂಪುಟದಲ್ಲಿ ಯಾವ ಖಾತೆ ಕೊಡಬೇಕು? ಮಂತ್ರಿಗಿರಿ ಕೊಟ್ಟರೆ ಅವರ ಸ್ಥಾನಮಾನ, ವರ್ಚಸ್ಸು, ಹಿರಿತನಕ್ಕೆ ಸರಿಹೊಂದುವುದಾ? ಎಂಬುದು ಇದೀಗ ಬಿಜೆಪಿ ನಾಯಕರಿಗೆ ದೊಡ್ಡ ಪ್ರಶ್ನೆಯಾಗಿದೆ. ಇದೇ ಕಾರಣಕ್ಕೆ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಅನುಭವಿ, ಕಾನೂನಿನ ಪರಿಜ್ಞಾನ ಹೊಂದಿರುವ ಹಾಗೂ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾನೂನು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಸುರೇಶ್ ಕುಮಾರ್ ಅವರ ಹೆಸರು ಸಹ ಸ್ಪೀಕರ್ ಹುದ್ದೆಯ ರೇಸ್ನಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಬೆಂಗಳೂರು ಭಾಗದ ಶಾಸಕರ ನಡುವೆ ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ ಇದೆ. ಹೀಗಾಗಿ ಸುರೇಶ್ ಕುಮಾರ್ ಅವರನ್ನು ಸ್ಪೀಕರ್ ಮಾಡಿದರೆ ಒಳ್ಳೆಯದು ಎಂಬ ಚರ್ಚೆ ಚಾಲ್ತಿಗೆ ಬಂದಿದೆ. ಹೀಗಾಗಿ ರಮೇಶ್ ಕುಮಾರ್ ಸ್ಪೀಕರ್ ಹುದ್ದೆ ಅಲಂಕರಿಸಿದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos