ಮಹದೇಶ್ವರ ಬೆಟ್ಟ ಮಹಾಶಿವರಾತ್ರಿ ಜಾತ್ರೆಗೆ ಸೂಚನೆ: ಸಚಿವ ಕೆ ವೆಂಕಟೇಶ್

ಮಹದೇಶ್ವರ ಬೆಟ್ಟ ಮಹಾಶಿವರಾತ್ರಿ ಜಾತ್ರೆಗೆ ಸೂಚನೆ: ಸಚಿವ ಕೆ ವೆಂಕಟೇಶ್

ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂಬರಲಿರುವ ಮಹಾ ಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಇರುವ ಎಲ್ಲ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಭಕ್ತಾಧಿಗಳಿಗೆ ನೆರಳಿನ ವ್ಯವಸ್ಥೆ ಮಾಡಬೇಕು. ಖಾಯಂ ಶೌಚಾಲಯಗಳ ಜೊತೆಗೆ ತಾತ್ಕಾಲಿಕ ಶೌಚಾಲಯಗಳನ್ನು ಸಹ ಅಳವಡಿಸಬೇಕು ಎಂದು ತಿಳಿಸಿದರು.

ಜಾತ್ರೆ ಸಂದರ್ಭದಲ್ಲಿ ಹೆಚ್ಚು ಭಕ್ತರು ಬರುವುದರಿಂದ ಸ್ವಚ್ಛತಾ ನಿರ್ವಹಣೆಗೆ ಹೆಚ್ಚು. ಕ್ಷೇತ್ರದಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ಲಾಸ್ಟಿಕ್ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಾತ್ರೆ ನಡೆಯುವ ದಿನಗಳಲ್ಲಿ ವಿಶೇಷ ದಾಸೋಹ ಇರಬೇಕು. ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಕೆ.ಎಸ್.ಆರ್.ಟಿ.ಸಿ ಬಸ್​​ಗಳು, ಇನ್ನಿತರ ಲಘು ವಾಹನಗಳಿಗೂ ನಿಗದಿತ ಸ್ಥಳ ಇರಬೇಕು. ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚು ಜನರು ಆಗಮಿಸುವ ಹಿನ್ನೆಲೆ ಕೆ.ಎಸ್.ಆರ್.ಟಿ.ಸಿಯಿಂದ ಹೆಚ್ಚು ಸಂಖ್ಯೆಯಲ್ಲಿ ಬಸ್‍ಗಳ ವ್ಯವಸ್ಥೆ ಮಾಡಬೇಕು.

ಭದ್ರತೆಗಾಗಿ ಪೊಲೀಸ್ ನಿಯೋಜನೆ, ವಿದ್ಯುತ್ ದೀಪಾಲಂಕಾರ, ನಿರಂತರ ವಿದ್ಯುತ್ ಪೂರೈಕೆಯಂತಹ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಇತರ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ತಿಳಿಸಿದರು. ಸಾಲೂರು ಶ್ರೀಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಂ.ಆರ್. ಮಂಜುನಾಥ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos