ಮಧ್ವರ ಕುರುಹು ಸಾರುವ ಪಾಜಕ

ಮಧ್ವರ ಕುರುಹು ಸಾರುವ ಪಾಜಕ

ಉಡುಪಿ. ಜ, 8 : ಉಡುಪಿಯಿಂದ ಆಗ್ನೇಯ ದಿಕ್ಕಿಗೆ ನೇರ ಸಾಗಿದರೆ ಐದು ಕಿ.ಮೀ., ಬಸ್ ಮಾರ್ಗದಲ್ಲಿ ಸಾಗಿದರೆ 16 ಕಿ.ಮೀ. ದೂರದಲ್ಲಿ ಇದೆ. ಇದು ಮಧ್ವಾಚಾರ್ಯರ ಜನ್ಮಸ್ಥಳ. ಅವರ ತಂದೆ ಮಧ್ಯಗೇಹ ಭಟ್ಟರು ವಾಸವಿದ್ದ ಮನೆಯಲ್ಲಿ ಅವರ ಕುಲದೇವ ಅನಂತಪದ್ಮನಾಭ ಪೂಜಿತನಾಗುತ್ತಿದ್ದಾನೆ. ಮಧ್ಯಗೇಹ ಭಟ್ಟರು ಸೇವೆ ಸಲ್ಲಿಸಿದ ಉಡುಪಿಯ ಶ್ರೀಅನಂತೇಶ್ವರನ ಉತ್ಸವಮೂರ್ತಿ ಇದು ಎಂಬ ಪ್ರತೀತಿಯೂ ಇದೆ.
ಪಾಜಕ ಪರಿಸರದಲ್ಲಿ ಮಧ್ವಾಚಾರ್ಯರು ಬಿಟ್ಟು ಹೋದ ಹಲವು ಕುರುಹುಗಳು ಕಂಡುಬರುತ್ತವೆ. ಅನಂತಪದ್ಮನಾಭ ಪೂಜಾ ಮಂದಿರದ ಬಲ ಬದಿ ತುಳಸಿಕಟ್ಟೆ ಬಳಿ ದೊಡ್ಡ ಹಾಸುಗಲ್ಲು ಇದೆ. ಇದು ಮಧ್ವರು ವಾಸುದೇವನಾಗಿದ್ದಾಗ ಬಾಲಕನಿಗೆ ತಂದೆಯವರು ಅಕ್ಷರಾಭ್ಯಾಸ ಮಾಡಿಸಲು ಉಪಯೋಗಿಸಿದ ಶಿಲೆ. ಜ್ಞಾನಾಭಿವೃದ್ಧಿಗೆ ಪೂರಕ ಎಂಬ ಕಾರಣಕ್ಕಾಗಿ ಈ ಶಿಲೆಯ ಮೇಲೆ ಅಕ್ಷರಾಭ್ಯಾಸ ಮಾಡಿಸುವವರು ಇದ್ದಾರೆ.
ಹುಣಸೆ ಬೀಜ- ಮೋಕ್ಷದ ಬೀಜ
ಮಧ್ಯಗೇಹರು ಒಬ್ಬರಿಂದ ಸಾಲವಾಗಿ ಒಂದು ಎತ್ತನ್ನು ಕೊಂಡು ಆ ಸಾಲ ತೀರಿಸಲಾಗಲಿಲ್ಲ. ಆತ ಬಂದು ಮನೆ ಎದುರು ಧರಣಿ ನಡೆಸಿದ, ಒಳ ಹೋಗಬಿಡಲಿಲ್ಲ. ವಾಸುದೇವ ಊಟಕ್ಕೆ ಕರೆಯಲು ಹೋದಾಗ ಪರಿಸ್ಥಿತಿ ಗಮನಿಸಿದ. ಮನೆಯಲ್ಲಿದ್ದ ಹುಣಸೆ ಮರದ ಬೀಜಗಳನ್ನು ಧನದ ಮೊತ್ತಕ್ಕೆ ಎಣಿಸಿ ಎತ್ತಿನ ಮಾಲಕನಿಗೆ ಕೊಟ್ಟ. ಆತ ಮನೆಗೆ ಹೋದ. ಅನಂತರ ಒಂದು ದಿನ ಮಧ್ಯಗೇಹರು ಹಣ ಹೊಂದಿಸಿಕೊಂಡು ಕೊಡಲು ಹೋದಾಗ “ನಿಮ್ಮ ಮಗ ಅಂದೇ ಸಾಲವನ್ನು ತೀರಿಸಿದ’ ಎಂದು ಹಣ ಸ್ವೀಕರಿಸಲು ನಿರಾಕರಿಸಿದ. ಇದು ಮೋಕ್ಷದ ಬೀಜ ಎಂದು ಮಧ್ವವಿಜಯದಲ್ಲಿ ಉಲ್ಲೇಖವಿದೆ. ಇದನ್ನೇ ದಾಸವರೇಣ್ಯ ಶ್ರೀಜಗನ್ನಾಥದಾಸರು ಹೀಗೆ ಬಣ್ಣಿಸಿದ್ದಾರೆ: ಹುಣಸೆಬೀಜದಿ ಪಿತ ಋಣವ ತಿದ್ದಿದ ಪೂರ್ಣ ಗುಣವಂತ ಗುರುವೆ ದಯವಾಗೊ| ದಯವಾಗೊ ನೀನೆನ್ನ ಋಣ ಮೂರರಿಂದ ಗೆಲಿಸಯ್ಯ|| ತಂದೆ ಋಣ ತೀರಿಸಿದ ಈ ಹುಣಸೆ ಮರ ಮಂದಿರದ ಆವರಣದಲ್ಲಿದೆ. ಪ್ರಾಯಃ ಅದೇ ಮರವಲ್ಲದೆ ಇರಬಹುದು, ಅದರ ವಂಶವೃಕ್ಷ ಬೆಳೆದಿದೆ. ಈ ವೃಕ್ಷದ ದರ್ಶನ ಋಣ ಪರಿಹಾರಕ್ಕೆ ಉತ್ತಮ ಸಾಧನ ಎಂಬುದು ಜ್ಞಾನಿಗಳ ಅಭಿಮತ.

ಫ್ರೆಶ್ ನ್ಯೂಸ್

Latest Posts

Featured Videos