ನನಗೊಂದು ಅವಕಾಶ ಕೊಡಿ ಇಲ್ಲದಿದ್ರೆ ನಾನು ಸತ್ತ ಹಾಗೆ : ಎಂ.ಲಕ್ಷ್ಮಣ್

ನನಗೊಂದು ಅವಕಾಶ ಕೊಡಿ ಇಲ್ಲದಿದ್ರೆ ನಾನು ಸತ್ತ ಹಾಗೆ : ಎಂ.ಲಕ್ಷ್ಮಣ್

ಮೈಸೂರು: ಮೈಸೂರು ಕೊಡಗು ಲೋಕಸಭಾ ಚುನಾವಣೆ ಅಖಾಡ ರಂಗೇರಿದ್ದು, ತಮಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ಎಂ ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೈಸೂರು ಕೊಡಗು ಕ್ಷೇತ್ರದ ಜನತೆಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಸೇವೆ ಮಾಡಲಿಕ್ಕೆ ನನಗೊಂದು ಅವಕಾಶ ಕೊಡಿ. ಈ ಬಾರಿ ಕೈ ಹಿಡಿಯದೇ ಹೋದರೆ ನಾನು ಸತ್ತ ಹಾಗೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮತದಾರರಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದರು..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, 1977 ರ ನಂತರ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಈ ಭಾರಿ ಟಿಕೆಟ್ ಸಿಕ್ಕಿದೆ. ಸಿದ್ದರಾಮಯ್ಯರನ್ನ ಒಕ್ಕಲಿಗರ ವಿರೋಧ ಎನ್ನುವರಿಗೆ ಇದು ತಕ್ಕ ಉತ್ತರ. ನನ್ನ ಮತ್ತು ವಿಜಯ್ ಕುಮಾರ್ ಹೆಸರು ಹೈಕಮಾಂಡ್ ಗೆ ತಲುಪಿತ್ತು. ಇಬ್ಬರಲ್ಲಿ ನನಗೆ ಅವಕಾಶ ಸಿಕ್ಕಿದೆ. ನಾನು ಒಬ್ಬ ಬಡ ರೈತ ಕುಟುಂಬದಿಂದ ಬಂದವನು. ನನಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲ. ನಾನು ಕೆಪಿಸಿಸಿ ವಕ್ತಾರನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ನನ್ನದು ಅಳಿಲು ಸೇವೆಯಿದೆ. ಮೈಸೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಕ್ಕಲಿಗ ಸಮುದಾಯದ ಮತ ಹೆಚ್ಚಿವೆ. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನ ಒಗ್ಗೂಡಿಸಿಕೊಂಡು ಹೋರಾಟ ಮಾಡಿದ್ದೇನೆ ಎಂದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನನ್ನ ಹೆಸರಿನ ಮುಂದೆ ರಾಜ ಒಡೆಯರ್ ಏನು ಇಲ್ಲಾ. ನಾನೊಬ್ಬ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಕೆಲವರು ಲಕ್ಷ್ಮಣ್ ಗೌಡ ಎಂದು ಬದಲಾವಣೆ ಮಾಡಿಕೋ ಎಂದರು. ಚುನಾವಣೆಗೋಸ್ಕರ ಹೆಸರು ಬದಲಾವಣೆ ಮಾಡೋದು ಸರಿಯಲ್ಲ. ನಮ್ಮ ತಂದೆ ತಾಯಿ ಇಟ್ಟಿರುವ ಹೆಸರು ಎಂ ಲಕ್ಷ್ಮಣ್. ನಾನು ದಿನದ 24 ಗಂಟೆ ಕೆಲಸ ಮಾಡುತ್ತೇನೆ. ಮೈಸೂರು ಕೊಡಗು ಕ್ಷೇತ್ರ ಸೇರಿದಂತೆ 22 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಜೆ ವಿಜಯ್ ಕುಮಾರ್ ಸೇರಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos