ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಇಂದು ಲಕ್ನೋದ ಏಕಾನಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆಯುತ್ತದೆ. ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಐದು ಐಪಿಎಲ್ 2024 ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಹೋರಾಡುತ್ತಿದೆ, ಆದರೆ ಕೆಎಲ್ ರಾಹುಲ್ ಅವರ ಲಕ್ನೋ ಸೂಪರ್ ಜೈಂಟ್ಸ್ ನಾಲ್ಕು ಐಪಿಎಲ್ 2024 ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಉತ್ತಮ ಸ್ಥಾನದಲ್ಲಿದೆ.
ಪ್ರಚಂಡ ವೇಗಿ ಮಯಾಂಕ್ ಯಾದವ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆದರೂ ಲಖನೌ ಬೌಲಿಂಗ್ ಪಡೆ ಬಲಿಷ್ಠವಾಗಿಯೇ ಇದೆ. ನಾಯಕ ಕೆ.ಎಲ್.ರಾಹುಲ್ ದೊಡ್ಡ ಇನ್ನಿಂಗ್ಸ್ ಆಡಲು ಕಾಯುತ್ತಿದ್ದು, ಅಭಿಮಾನಿಗಳೂ ಅವರ ಮೇಲೆ ಭಾರಿ ನಿರೀಕ್ಷೆ ಇರಿಸಿದ್ದಾರೆ. ಲಖನೌ ತಂಡದ ಪರ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋನಿಸ್ ಉತ್ತಮ ಲಯದಲ್ಲಿದ್ದಾರೆ. ಲಖನೌ ಪರ ಬೌಲಿಂಗ್‌ನಲ್ಲಿ ಯಶ್ ಠಾಕೂರ್, ರವಿ ಬಿಷ್ಣೋಯಿ, ನವೀನ್ ಉಲ್ ಹಕ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ಇನ್ನೊಂದೆಡೆ ರಿಷಭ್ ಪಂತ್, ಡೇವಿಡ್ ವಾರ್ನರ್ ಮೇಲೆ ಭಾರಿ ಒತ್ತಡವಿದ್ದು, ಡೆಲ್ಲಿಯ ಅದೃಷ್ಟ ಬದಲಾಗಬೇಕಿದ್ದರೆ ಈ ಇಬ್ಬರು ತಾರಾ ಆಟಗಾರರು ಮಿಂಚಲೇಬೇಕು. ಇದರ ಜತೆಗೆ ಪೃಥ್ವಿ ಶಾ, ಟ್ರಿಸ್ಟಿನ್ ಸ್ಟಬ್ಸ್ ಹಾಗೂ ಅಭಿಷೇಕ್ ಪೋರೆಲ್ ಅಬ್ಬರಿಸಬೇಕಿದೆ. ಇನ್ನುಳಿದಂತೆ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಏನ್ರಿಚ್ ನೋಕಿಯಾಗೆ ಇಂದು ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಖಲೀಲ್ ಅಹಮ್ಮದ್, ಇಶಾಂತ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ಜಬಾಬ್ದಾರಿಯುತ ಬೌಲಿಂಗ್ ಪ್ರದರ್ಶನ ತೋರಬೇಕಿದೆ.