CSK ವಿರುದ್ದ LSG ಗೆ ಭರ್ಜರಿ ಜಯ

CSK ವಿರುದ್ದ LSG ಗೆ ಭರ್ಜರಿ ಜಯ

ಬೆಂಗಳೂರು: ನಿನ್ನೆ ಚೆನ್ನೈನ ಐಕಾನಿಕ್ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 39ನೇ ರೋಚಕ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಈ ಮೂಲಕ ಐಪಿಎಲ್ 2024ರಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿದ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋತಿದ್ದು, ಪ್ರಸ್ತುತ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ, ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈವರೆಗೆ ಆಡಿದ 8 ಪಂದ್ಯಗಳಲ್ಲಿ 4 ಗೆಲುವು ಮತ್ತು 4 ಸೋಲುಗಳೊಂದಿಗೆ ಪ್ರಸ್ತುತ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರ 5ನೇ ಸ್ಥಾನಕ್ಕೆ ಇಳಿದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕ ಮತ್ತು ಶಿವಂ ದುಬೆ ಅವರ ಸ್ಫೋಟಕ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು.

211 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾರ್ಕಸ್ ಸ್ಟೋಯಿನಿಸ್ ಅವರ ಭರ್ಜರಿ ಶತಕದ ಸಹಾಯದಿಂದ 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು ಮತ್ತು ಚೆಪಾಕ್‌ನಲ್ಲಿ ನೆರೆದಿದ್ದ ಯೆಲ್ಲೋ ಜನಸಾಗರವನ್ನು ತಣ್ಣಗಾಗುವಂತೆ ಮಾಡಿತು.

ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡಲಿಲ್ಲ. ನಂತರ ಬಂದ ನಿಕೋಲಸ್ ಪೂರನ್ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 34 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಇನ್ನು ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಮಾರ್ಕಸ್ ಸ್ಟೋಯಿನಿಸ್ ಕೇವಲ 63 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 124 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ಇವರಿಗೆ ಸಾಥ್ ನೀಡಿದ ದೀಪಕ್ ಹೂಡಾ 6 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 17 ರನ್ ಬಾರಿಸುವ ಮೂಲಕ ಜಯ ತಂದುಕೊಟ್ಟರು.

 

ಫ್ರೆಶ್ ನ್ಯೂಸ್

Latest Posts

Featured Videos