ಲೋಕಸಮರ; ಕನ್ಹಯ್ಯ ಕುಮಾರ್ ಗೆ ಒಂದೇ ದಿನದಲ್ಲಿ 30 ಲಕ್ಷ ದೇಣಿಗೆ ಕೊಟ್ಟು ಬೆಂಬಲಿಸಿದ ಜನ

ಲೋಕಸಮರ; ಕನ್ಹಯ್ಯ ಕುಮಾರ್ ಗೆ ಒಂದೇ ದಿನದಲ್ಲಿ 30 ಲಕ್ಷ ದೇಣಿಗೆ ಕೊಟ್ಟು ಬೆಂಬಲಿಸಿದ ಜನ

ಪಾಟ್ನಾ, ಮಾ.30, ನ್ಯೂಸ್ ಎಕ್ಸ್ ಪ್ರೆಸ್: ಬಿಹಾರದ ಬೆಗುಸರಾಯ್‌ನಲ್ಲಿ ಸಿಪಿಐನ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಯುವ ನಾಯಕ ಕನ್ಹಯ್ಯ ಕುಮಾರ್ ಈ ತನಕ ದೇಶಾದ್ಯಂತ ಸುಮಾರು 2,400 ಜನರಿಂದ 31 ಲಕ್ಷ ರೂ. ಹಣ ಸಂಗ್ರಹಿಸಿದ್ದಾರೆ.

ಮಾಜಿ ಪ್ರಕಾಶಕರೊಬ್ಬರಿಂದ ಗರಿಷ್ಠ 5 ಲಕ್ಷ ರೂ. ಕೊಡುಗೆ ಲಭಿಸಿದ್ದು, ಸುಮಾರು 1,500ದಷ್ಟು ಜನರು 100ರಿಂದ 50 ರೂ. ನೀಡಿ ಕುಮಾರ್ ಲೋಕಸಭಾ ಚುನಾವಣೆ ಖರ್ಚು ವೆಚ್ಚಕ್ಕೆ ಸಹಾಯಹಸ್ತ ಚಾಚಿದ್ದಾರೆ. ‘ಅವರ್ ಡೆಮಾಕ್ರಸಿ’ ಎಂಬ ಹೆಸರಿನ ಜನ ಸಹಯೋಗ ವೇದಿಕೆ ಮೂಲಕ ಹಣ ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿದೆ.

ಒಟ್ಟು 70 ಲಕ್ಷ ರೂ.ಸಂಗ್ರಹವಾದ ಬಳಿಕ ಜನರಿಂದ ಹಣ ಸಂಗ್ರಹಿಸುವ ಕಾರ್ಯವನ್ನು ಸ್ಥಗಿತ ಗೊಳಿಸಲಾಗುತ್ತದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ ಲೋಕಸಭಾ ಅಭ್ಯರ್ಥಿ ಗರಿಷ್ಠ 70 ಲಕ್ಷ ರೂ. ತನಕ ಖರ್ಚು ಮಾಡಲು ಅವಕಾಶವಿದೆ.

”ನಾವು ಯಾವಾಗಲೂ ಸಾಮಾನ್ಯ ಜನರ ದೇಣಿಗೆಯನ್ನು ಅವಲಂಬಿಸಿರುತ್ತೇವೆ. ಕನ್ಹಯ್ಯ ನಮ್ಮ ಹಳೆಯ ಪದ್ಧತಿಯಾದ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ಕೆ ದೇಶದೆಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮಗೆ ವಿದೇಶಿ ನಿಧಿಯ ನೆರವು ಬೇಡ” ಎಂದು ಸಿಪಿಐ ಘಟಕದ ಕಾರ್ಯದರ್ಶಿ ಸತ್ಯ ನಾರಾಯಣ ಸಿಂಗ್ ಹೇಳಿದ್ದಾರೆ.

”ನಾವು ಮಾ.26 ರಂದು ಕನ್ಹಯ್ಯ ಕುಮಾರ್‌ಗೋಸ್ಕರ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೆವು. ಮೊದಲ ದಿನವೇ 30 ಲಕ್ಷ ರೂ. ಸಂಗ್ರಹವಾಗಿದೆ. ಈತನಕ 31 ಲಕ್ಷ ರೂ. ಸಂಗ್ರಹವಾಗಿದೆ. ಇದೀಗ ಸರ್ವರ್ ನಿಧಾನವಾಗಿದೆ. ಜನರಿಂದ ಸಂಗ್ರಹಿಸಿರುವ ಹಣ ಸಂಪೂರ್ಣ ಪಾರದರ್ಶಕವಾಗಿದೆ. ‘ಅವರ್ ಡೆಮಾಕ್ರಸಿ’ ದೇಣಿಗೆದಾರರ ಸಂಪೂರ್ಣ ವಿವರ ನೀಡಲಿದೆ” ಎಂದು ‘ಅವರ್ ಡೆಮಾಕ್ರಸಿ’ ಸ್ಥಾಪಕ ಬಿಲಾಲ್ ಝೈದಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos