ಮುಸ್ಲಿಮ್ ಬಿಲ್ಲವ ಸಮಾವೇಶಕ್ಕೆ ವಿರೋಧ

ಮುಸ್ಲಿಮ್ ಬಿಲ್ಲವ ಸಮಾವೇಶಕ್ಕೆ ವಿರೋಧ

ಬೆಂಗಳೂರು, ಜ.14: ಮುಸ್ಲಿಂ – ಬಿಲ್ಲವ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಅವರಿಗೆ ವ್ಯಕ್ತಿಯೋರ್ವ ಜೀವ ಬೆದರಿಕೆ ಒಡ್ಡಿದ್ದು, ಇಲ್ಲಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಹಾಗೂ ಬಿಲ್ಲವ ಸಮುದಾಯದ ನಡುವೆ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.  ಅವರು ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿದ್ದರು. ಆದರೆ ಸಮಾವೇಶಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆದಿತ್ತು. ಇದೇ ವಿಚಾರವಾಗಿ ಜನವರಿ 11 ರಂದು ಅಮೀನ್ ಮಟ್ಟು ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೋರ್ವ ತನ್ನನ್ನು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಎಂದು ಪರಿಚಯಿಸಿಕೊಂಡಿದ್ದು ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾನೆ.

ಕಾರ್ಯಕ್ರಮವನ್ನು ನಿಲ್ಲಿಸದೇ ಇದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಮೀನ್ ಮಟ್ಟು ಮಾತ್ರವಲ್ಲದೆ ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ಅವರನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಎಚ್ಚರಿಸಿದ್ದಾನೆ. ಅಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಅಶ್ಲೀಲ ಪದಗಳ ಮೂಲಕ ನಿಂದಿಸಿದ್ದಾನೆ ಎಂದು ಅಮೀನ್ ಮಟ್ಟು ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos