ಗಡುವು ಮೀರಿದರೂ ಆಸ್ತಿ ವಿವರ ಸಲ್ಲಿಸದ ಶಾಸಕರು

ಗಡುವು ಮೀರಿದರೂ ಆಸ್ತಿ ವಿವರ ಸಲ್ಲಿಸದ ಶಾಸಕರು

ಬೆಂಗಳೂರು, ನ. 4: ಆಸ್ತಿ ವಿವರ ಸಲ್ಲಿಸಲು ಲೋಕಾಯುಕ್ತ ಗಡುವು ನೀಡಿ ಹತ್ತು ದಿನ ಕಳೆದರೂ ಶಾಸಕರು ಆಸ್ತಿ ವಿವರ ನೀಡದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ.

ಅ. 13 ರಂದು ಕರ್ನಾಟಕ ಲೋಕಾಯುಕ್ತ 43 ಶಾಸಕರು ಹಾಗೂ 26 ವಿಧಾನ ಪರಿಷತ್ ಸದಸ್ಯರಿಗೆ 1೦ ದಿನಗಳೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿತ್ತು. ಇಷ್ಟಾದರೂ 24 ಶಾಸಕರು ಹಾಗೂ 12 ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ.

ನಿಗದಿತ ಸಮಯದಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 9 ಸದಸ್ಯರು, ಜೆಡಿಎಸ್‌ನಿಂದ ಮೂವರು, ಇಬ್ಬರು ಅನರ್ಹ ಶಾಸಕರು ಮತ್ತು ಬಿಎಸ್ಪಿ ಉಚ್ಚಾಟಿತ ಶಾಸಕ ಎನ್. ಮಹೇಶ್ ಹೆಸರಿದೆ.

ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ, ಡಿ.ಎಸ್. ಹೊಲಗೇರಿ, ರೂಪಾಲಿ ಸಂತೋಷ್ , ದಿನಕರ್ ಕೇಶವ ಶೆಟ್ಟಿ , ಜಿ.ಬಿ. ಜ್ಯೋತಿಗಣೇಶ್, ಹರೀಶ್ ಪೂಂಜ, ಎಂ.ವೈ. ಪಾಟೀಲ್, ಸತೀಶ್ ರೆಡ್ಡಿ, ರಾಜಕುಮಾರ್ ಪಾಟೀಲ್ ಹೆಸರುಗಳಿವೆ. ಕಾಂಗ್ರೆಸ್‌ನ ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಬಿ. ನಾರಾಯಣ ರಾವ್, ಟಿ.ಡಿ. ರಾಜೇಗೌಡ, ವೆಂಕಟರಮಣಪ್ಪ , ರೂಪಕಲಾ, ಟಿ. ವೆಂಕಟರಮಣಯ್ಯ, ಕೆ.ವೈ. ನಂಜೇಗೌಡ, ಕುಸುಮಾವತಿ ಶಿವಳ್ಳಿ ಹೆಸರುಗಳಿವೆ.

ಜೆಡಿಎಸ್‌ನ ಸಿ.ಎನ್. ಬಾಲಕೃಷ್ಣ, ಎಂ. ಶ್ರೀನಿವಾಸ್, ಎಂ.ಸಿ. ಮನಗೂಳಿ ಹಾಗೂ ಅನರ್ಹ ಶಾಸಕರಾದ ಅಡಗೂರು ಎಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಆಸ್ತಿ ವಿವರ ಸಲ್ಲಿಸದ ಪಟ್ಟಿಯಲ್ಲಿದ್ದಾರೆ.

ವಿಧಾನ ಪರಿಷತ್ ಸದಸ್ಯರ ಪೈಕಿ ಕಾಂಗ್ರೆಸ್‌ನ 6 ಸದಸ್ಯರು, ಜೆಡಿಎಸ್ ಮತ್ತು ಬಿಜೆಪಿಯ ತಲಾ ಮೂವರ ಸೇರಿ 12 ಸದಸ್ಯರು ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ ಎಂದು ದಾಖಲೆಗಳು ಸ್ಪಷ್ಟಪಡಿಸಿವೆ. ಆಯನೂರು ಮಂಜುನಾಥ್, ಅಲ್ಲಂ ವೀರಭದ್ರಪ್ಪ, ತೇಜಸ್ವಿನಿ ಗೌಡ, ಕೆ.ಟಿ. ಶ್ರೀಕಂಠೇಗೌಡ, ಕಾಂತರಾಜು, ಎನ್.ಅಪ್ಪಾಜಿಗೌಡ, ಕೆ.ಪಿ. ನಂಜುಂಡಿ, ನಜೀರ್ ಅಹ್ಮದ್ , ಡಿ.ಯು.ಮಲ್ಲಿಕಾರ್ಜುನ, ಎಂ.ನಾರಾಯಣಸ್ವಾಮಿ, ಪಿ.ಆರ್. ರಮೇಶ್, ಸಿ.ಎಂ. ಇಬ್ರಾಹಿಂ ಹೆಸರುಗಳು ಪಟ್ಟಿಯಲ್ಲಿವೆ.

ಕ್ರಮಕ್ಕೆ ಅವಕಾಶವಿದೆ

ಪ್ರತಿವರ್ಷ ರಾಜ್ಯದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಲೋಕಾಯುಕ್ತ ಕಚೇರಿಗೆ ಸಲ್ಲಿಸಬೇಕು. ಆದರೆ ಇತ್ತೀಚೆಗೆ ಹಲವರು ಆಸ್ತಿ ವಿವರಗಳನ್ನು ಸಲ್ಲಿಸುತ್ತಿಲ್ಲ.

ಈ ರೀತಿ ಕಾನೂನನ್ನು ಉಲ್ಲಂಘಿಸುವ ಜನ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಜರಗಿಸುವ ಅವಕಾಶ ಲೋಕಾಯುಕ್ತ ಕ್ಕಿದೆ. ನನ್ನ ಅವಧಿಯಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ ೧೭೬ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಲ್ಲಿ ಐಪಿಸಿ ಸೆಕ್ಷನ್ ೧೭೭ರ ಅನ್ವಯ ಕ್ರಮ ಜರಗಿಸಬಹುದು.

 

 

ಫ್ರೆಶ್ ನ್ಯೂಸ್

Latest Posts

Featured Videos