ಕಾಂಗ್ರೆಸ್ ತೊರೆಯಲು ಲಕ್ಷ್ಮೀ,  ಡಿಕೆಶಿ ಕಾರಣ

ಕಾಂಗ್ರೆಸ್ ತೊರೆಯಲು ಲಕ್ಷ್ಮೀ,  ಡಿಕೆಶಿ ಕಾರಣ

ಬೆಂಗಳೂರು, ನ. 16: ಕಾಂಗ್ರೆಸ್ ಪಕ್ಷದಲ್ಲಿ ನಾನು ಸೀನಿಯರ್ ಆಗಿದ್ದೆ. ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನನ್ನ ತಲೆಯ ಮೇಲೆ ಕೂರಿಸಲು ಬಂದಿದ್ದರು. ಅಲ್ಲದೇ ಜಿಲ್ಲೆಯ ರಾಜಕಾರಣದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿದ್ದರು. ಇದೇ ನಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವೆಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್‌ನಲ್ಲಿ ಮಾತನಾಡಿದ ಅವರು, ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪವೇ ನಮ್ಮ ನಡುವಿನ ಅಸಮಾಧಾನಕ್ಕೆ ಕಾರಣವಾಯಿತು. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಕೊಡಿಸಿ ತಪ್ಪು ಮಾಡಿದೆವು. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಯಾವುದೇ ಸ್ಥಾನ ಕೊಡಬೇಡಿ ಎಂದು ಒತ್ತಾಯಿಸಿದ್ದೆ. ನಮ್ಮ ಮಾತು ಮೀರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರು. ನಾನು ಸುಮ್ಮನಿದ್ದಿದ್ದರೆ ಅವರನ್ನು ಸಚಿವರನ್ನಾಗಿ ಮಾಡುತ್ತಿದ್ದರು ಎಂದು ರಮೇಶ್ ತಮ್ಮ ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ನನಗಿಂತ ತುಂಬಾ ಕಿರಿಯರು. ಆದರೆ, ನನ್ನ ತಲೆ ಮೇಲೆ ಅವರನ್ನು ಕೂರಿಸಲು ಬಂದರು. ಇದು ನನಗೆ ಸಹಿಸಲು ಆಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾನು ಪಕ್ಷ ಬಿಡುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಭಾವಿ ಆಗಲು ಡಿಕೆಶಿ ಅಷ್ಟೇ ಅಲ್ಲ ನಾವೂ ಕೂಡ ಕಾರಣ. ಸಚಿವೆಯಾದರೆ ಹೊಟ್ಟೆಕಿಚ್ಚು ಪಡುವಷ್ಟು ಸಣ್ಣವನಲ್ಲ. ಅವರ ಹಣೆಬರದಲ್ಲಿ ಇದ್ದರೆ ಸಚಿವೆಯಾಗಲಿ ತೊಂದರೆ ಇಲ್ಲ. ಆದರೆ, ಅವರಿಗಾಗಿ ದುಡಿವರ ಬಗ್ಗೆ ಚಿಂತೆ ಮಾಡಬೇಕಿತ್ತು. ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಅವರ ಕೈಯಲ್ಲಿದೆ. ಅದೇ ರೀತಿ ನಂದೇ ರಾಜ್ಯ ಎನ್ನುವುದು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಬಂತು. ಯಾರು ದೊಡ್ಡವರು, ಸಣ್ಣವರು ಎಂಬುದು ತಿಳಿಯಲಿಲ್ಲ. ರಾಜಕಾರಣದಲ್ಲಿ ಫೋಸ್ ಕೊಡದವರು ಶೇ.100 ಸರಿ. ಆದರೆ ಫೋಸ್ ಕೊಟ್ಟರೆ ಅವರು ಬಿಗ್ ಝೀರೋ ಇರುತ್ತಾರೆ ಎಂದು ಅವರಿಗೆ ತಿರುಗೇಟು ನೀಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos