ಹೊಸ ವರ್ಷದ: ಕೆ.ಎಸ್.ಆರ್.ಟಿ.ಸಿ ಯಿಂದ ಅಪಘಾತದಲ್ಲಿ ಮೃತಪಟ್ಟ ವರಿಗೆ ತಲಾ 1 ಕೋಟಿ!!

ಹೊಸ ವರ್ಷದ: ಕೆ.ಎಸ್.ಆರ್.ಟಿ.ಸಿ ಯಿಂದ ಅಪಘಾತದಲ್ಲಿ ಮೃತಪಟ್ಟ ವರಿಗೆ ತಲಾ 1 ಕೋಟಿ!!

ಬೆಂಗಳೂರು: ಇಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ 2024ನೇ ಸಾಲಿನ ಹೊಸ ವರ್ಷವನ್ನು ಆಚರಿಸಿದರು ಎಲ್ಲರಿಗೂ ಶುಭಾಶಯ ಕೋರಿದರು. ಕಳೆದ  ಒಂದು ವರ್ಷದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ಒಟ್ಟು 12 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿಗಳ ಪರಿಹಾರ  ಮೊತ್ತವನ್ನು ಪಾವತಿಸಲಾಗಿದೆ. ಇದರಲ್ಲಿ ಇಂದು 03 ಸಿಬ್ಬಂದಿಗಳ ಅವಲಂಬಿತ ಕುಟುಂಬಕ್ಕೆ ತಲಾ ರೂ.1 ಕೋಟಿಯಂತೆ ಪರಿಹಾರ ಮೊತ್ತವನ್ನು ವಿತರಿಸಲಾಯಿತು.

ಮೃತ ಅವಲಂಬಿತರ ಕುಟುಂಬದವರಿಗೆ  ಸೀರೆ ಮತ್ತು ಸಿಹಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಾರಿಗೆ ಸಚಿವರು ಮೃತರನ್ನು ಕಳೆದುಕೊಂಡು ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ ಆದರೆ ಆರ್ಥಿಕ ವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಮಾಡುತ್ತಿದ್ದೇವೆ. ಕೋಟಿ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ , ಮನೆ  ಮಾಡಿಕೊಂಡು ಯಾರನ್ನು ಅವಲಂಬಿಸದೆ ಬದುಕು‌ ನಡೆಸಬಹುದಾಗಿದೆ.

ಸಾರಿಗೆ ಸುರಕ್ಷಾ ಅಪಘಾತ ವಿಮಾ ಪರಿಹಾರ ಯೋಜನೆ

ನಿಗಮದಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅದೇ ರೀತಿ, ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಮೊತ್ತದ ಆರ್ಥಿಕ ಪರಿಹಾರ ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ  ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ರವರೊಂದಿಗೆ  ರೂ.50 ಲಕ್ಷ ಹಾಗೂ SBI ರವರ Corporate Salary Package ಅಡಿಯಲ್ಲಿ ರೂ.50 ಲಕ್ಷ ನೀಡಲಾಗುತ್ತಿದೆ.

  • ಈ ಯೋಜನೆ ಅಡಿಯಲ್ಲಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ಒಟ್ಟು ರೂ. 1.00 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ನೀಡಲಾಗುತ್ತದೆ.
  • ಸಾರಿಗೆ ನಿಗಮಗಳಲ್ಲಿ ದೇಶದಲ್ಲಿಯೇ ಈ ಯೋಜನೆಯನ್ನು ಪ್ರಥಮ ಬಾರಿಗೆ ಕರಾರಸಾ ನಿಗಮದಲ್ಲಿ ಜಾರಿಗೊಳಿಸಲಾಗಿತ್ತು,‌ ತದನಂತರ ಇತರೆ ನಿಗಮಗಳಲ್ಲಿಯೂ ಜಾರಿಗೆಗೊಳಿಸಲಾಗಿದೆ.

ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ

  • ಇದುವರೆವಿಗೂ 09 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ.

ಇಂದು 3 ಜನ ನೌಕರರ ಅವಲಂಬಿತರಿಗೆ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಯಿತು

1.ಶ್ರೀ ಬಿ.ಎಂ ಪುಟ್ಟಸ್ವಾಮಿ, ಚಾಲಕ, ಬಿ.ಸಂ:1272, ವಿಜಯನಗರ ಘಟಕ, ಮೈಸೂರು ವಿಭಾಗ, ರವರು ದಿನಾಂಕ: 25.01.2023 ರಂದು ದ್ವಿ ಚಕ್ರ ವಾಹನದಲ್ಲಿ ಹೋಗುವಾಗ ಕಾರಿನ ನಡುವೆ ನಡೆದ ಖಾಸಗಿ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಸದರಿರವರು 26 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಅಪಘಾತ ವಿಮಾ ಯೋಜನೆಯ ರೂ 1 ಕೋಟಿ ಹಾಗೂ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, DRBF, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ ರೂ 18.74 ಲಕ್ಷ.

2.ಶ್ರೀ ಅಶೋಕ್ ಕುಮಾರ್, ಚಾಲಕ, ಬಿ.ಸಂ:5957, ಧರ್ಮಸ್ಥಳ ಘಟಕ, ಪುತ್ತೂರು ವಿಭಾಗ, ರವರು ದಿನಾಂಕ: 24.05.2023 ರಂದು ದ್ವಿ ಚಕ್ರ ವಾಹನದಲ್ಲಿ ಹೋಗುವಾಗ ಕಾರಿನ ನಡುವೆ ನಡೆದ ಖಾಸಗಿ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಸದರಿರವರು 12 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಅಪಘಾತ ವಿಮಾ ಯೋಜನೆಯ ರೂ 1 ಕೋಟಿ ಹಾಗೂ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, DRBF, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ ರೂ 21.01 ಲಕ್ಷ

3.ಶ್ರೀ ರಮೇಶ ಜಿ, ಚಾಲಕ-ಕಂ-ನಿರ್ವಾಹಕ, ಬಿ.ಸಂ:4619, ಘಟಕ-5, ಬೆಂಗಳೂರು ಕೇಂದ್ರೀಯ ವಿಭಾಗ, ರವರು ದಿನಾಂಕ: 28.06.2023 ರಂದು  ಎಲೆಕ್ಟ್ರಿಕ್ ವಾಹನ ಸಂಖ್ಯೆ ಕೆ.ಎ -51 ಎಜೆ 0538 ರಲ್ಲಿ ಮಡಿಕೇರಿ-ಬೆಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಸದರಿರವರು 20 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಪತ್ನಿ ಹಾಗೂ ಒಬ್ಬ ಮಗನನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ ರೂ 24.81 ಲಕ್ಷ‌.

ಈ ಸಮಾರಂಭದಲ್ಲಿ ಶ್ರೀ ವಿ.ಅನ್ಬುಕುಮಾರ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಡಾ. ನಂದಿನಿ ದೇವಿ ಕೆ, ಭಾ.ಆ.ಸೇ, ನಿರ್ದೇಶಕರು (ಸಿ ಮತ್ತು ಜಾ), ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬ ವರ್ಗ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos