ಡೆಲ್ಲಿ ಎದುರು ಕೆಕೆಆರ್‌ಗೆ ಭರ್ಜರಿ ಜಯ

ಡೆಲ್ಲಿ ಎದುರು ಕೆಕೆಆರ್‌ಗೆ ಭರ್ಜರಿ ಜಯ

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಪ್ರೀಮಿಯರ್ ಲೀಗ್ ಎಂದರೆ ಅದು ನಮ್ಮ ಐಪಿಎಲ್ ಆರಂಭವಾಗಿ ಎಲ್ಲಾ ತಂಡಗಳು ಮೂರು ಮೂರು ಪಂದ್ಯಗಳ ಆಡಿದ್ದು. ನೆನ್ನೆ ನಡೆದ ಪಂದ್ಯದಲ್ಲಿ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ ತಂಡಗಳು ಮುಖಾಮುಖಿಯಾಗಿತ್ತು.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ತಂಡಕ್ಕೆ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 4.3 ಓವರ್‌ಗಳಲ್ಲಿ 60 ರನ್ ಜತೆಯಾಟವಾಡಿತು. ಸಾಲ್ಟ್ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ಎರಡನೇ ವಿಕೆಟ್‌ಗೆ ಸುನಿಲ್ ನರೈನ್ ಹಾಗೂ ಅಂಗ್‌ಕ್ರಿಶ್ ರಘುವಂಶಿ 104 ರನ್‌ಗಳ ಜತೆಯಾಟವಾಡಿದರು. ರಘುವಂಶಿ 27 ಎಸೆತಗಳಲ್ಲಿ 54 ರನ್ ಸಿಡಿಸಿದರೆ, ಸುನಿಲ್ ನರೈನ್ 39 ಎಸೆತಗಳಲ್ಲಿ ತಲಾ 7 ಸಿಕ್ಸರ್ ಹಾಗೂ ಬೌಂಡರಿ ಸಹಿತ 85 ರನ್ ಬಾರಿಸಿ ಮಿಂಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಂಡ್ರ ರಸೆಲ್ 41 ಹಾಗೂ ರಿಂಕು ಸಿಂಗ್ 8 ಎಸೆತಗಳಲ್ಲಿ 26 ರನ್ ಸಿಡಿಸಿ ಅಬ್ಬರಿಸಿದರು. ಪರಿಣಾಮ ಕೆಕೆಆರ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿತು.

ಗೆಲ್ಲಲು ಬರೋಬ್ಬರಿ 273 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಬೃಹತ್ ಮೊತ್ತ ನೋಡಿಯೇ ಕಂಗಾಲಾಗಿ ಹೋಯಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 33 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ವಾರ್ನರ್ 18 ಹಾಗೂ ಪೃಥ್ವಿ ಶಾ 10 ರನ್ ಗಳಿಸಿದರೆ, ಮಿಚೆಲ್ ಮಾರ್ಷ್, ಹಾಗೂ ಅಭಿಷೇಕ್ ಪೊರೆಲ್ ಶೂನ್ಯ ಸುತ್ತಿ ಪೆವಿಲಿಯನ್ ಹಾದಿ ಹಿಡಿದರು.

ಇನ್ನು ಪವರ್‌ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ತಂಡಕ್ಕೆ 5ನೇ ವಿಕೆಟ್‌ಗೆ ನಾಯಕ ರಿಷಭ್ ಪಂತ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಆಸರೆಯಾದರು. ರಿಷಭ್ ಪಂತ್ 25 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 55 ರನ್ ಬಾರಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರೆ, ಟ್ರಿಸ್ಟನ್ ಸ್ಟಬ್ಸ್ 32 ಎಸೆತಗಳನ್ನು ಎದುರಿಸಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಹಿತ 54 ರನ್ ಗಳಿಸಿ ಚಕ್ರವರ್ತಿಗೆ ಎರಡನೇ ಬಲಿಯಾದರು.

ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಿಢೀರ್ ಕುಸಿತ ಕಂಡಿತು. ಪರಿಣಮ 17.2 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 166 ರನ್ ಗಳಿಸಿ ಸರ್ವಪತನ ಕಂಡಿತು.

ಫ್ರೆಶ್ ನ್ಯೂಸ್

Latest Posts

Featured Videos