ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ದೇವನಹಳ್ಳಿ, ಜು. 26 : ಹಿರಿಯರು ತಮ್ಮ ದೂರದೃಷ್ಠಿಯಿಂದ ನಿರ್ಮಿಸಿರುವ ಜಲಮೂಲಗಳಾದ ಕೆರೆಗಳ ಪುನರ್‌ಶ್ಚೇತನಕ್ಕೆ ಒತ್ತು ನೀಡಿದರೆ ಕೆರೆಗಳಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ತಿಳಿಸಿದರು.

ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ 399 ಎಕರೆ 12 ಗುಂಟೆ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪೂರ್ವಜರು ಸ್ಥಾಪಿಸಿರುವ ಜಲ ಕಣ್ಣುಗಳನ್ನು ಸಂರಕ್ಷಿಸಿಕೊಳ್ಳಬೇಕು. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಇರುವ ಪ್ರಾಕೃತಿಕ ಸಂಪನ್ಮೂಲದ ಮೇಲೆ ಒತ್ತಡವಿದೆ. ಇರುವ ಸಂಪನ್ಮೂಲದಲ್ಲಿ ಈಗಾಗಲೇ ಒಂದೂವರೆ ಪಟ್ಟು ಹೆಚ್ಚು ಬಳಸಿಕೊಂಡಿದ್ದೇವೆ. ಕಳೆದ ತಿಂಗಳು ಚೈನೈ ಮಹಾ ನಗರದಲ್ಲಿ ನೀರಿನ ಒತ್ತಡಕ್ಕೆ ಸಿಲುಕಿದ್ದು, ನಮ್ಮ ಕಣ್ಣ ಮುಂದೆ ಆಗಿದೆ. ಇದೇ ರೀತಿ ಮಳೆ ಸಮಸ್ಯೆ ಮುಂದುವರೆದರೆ ಬೆಂಗಳೂರಿಗೂ ಸಹ ಇಂಥಹ ನೀರಿನ ಸಮಸ್ಯೆ ಬಂದೊದಗುತ್ತದೆ. ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಸಂರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈಗ ಅನುಭವಿಸುತ್ತಿರುವ ನೀರಿನ ಭವಣೆ ವಿಕೋಪಕ್ಕೆ ಹೋದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಬರಲಿದೆ ಎಂದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರದ ಯಾವುದೇ ಅನುದಾನವನ್ನು ಬಳಸದೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಜಿಲ್ಲೆಯಲ್ಲಿ ಹಲವು ಕೆರೆಗಳನ್ನು ಹೂಳೆತ್ತುತ್ತಿದ್ದೇವೆ. ಶತಮಾನಗಳಿಂದ ಹೂಳು ಎತ್ತಿಲ್ಲ, ಗಿಡಗಂಟೆ ಬೆಳೆದಿರುವ ಕೆರೆ ಮಧ್ಯೆ ಭಾಗದಲ್ಲಿರುವ ಕೆರೆಯಂಗಳ ಭೂ ಕಂಪನವಾಗಿರುವ ರೀತಿ ಬಿರುಕುಬಿಟ್ಟಿದೆ. ಜಲಮೂಲ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕೆರೆ ಅಭಿವೃದ್ದಿಯಲ್ಲಿ ಸ್ಥಳೀಯರ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ. ಕೆರೆ ಕುಂಟೆಗಳಲ್ಲಿ ನೀರು ತುಂಬದೆ ಇದ್ದರೆ ಮತ್ತು ಸಂರಕ್ಷಣೆ ಮಾಡದೇ ಇದ್ದರೆ ಪ್ರಸ್ತುತ ಈಗ ಅನುಭವಿಸುತ್ತಿರು ಭವಣೆ ವಿಕೋಪಕ್ಕೆ ಹೋದರೆ ಯಾವ ಮಟ್ಟಕ್ಕೆ ಹೋಗುತ್ತದೆಂಬುವುದು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.

ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಅಂತಾರಾಷ್ಟೀಯ ವಿಮಾನ ನಿಲ್ದಾಣ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ 30 ಕೋಟಿ ರೂ.ಗಳ ಅನುದಾನವನ್ನು ದೇವನಹಳ್ಳಿ ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಬಿಡುಗಡೆಗೊಳಿಸಿದ್ದೇನೆ. ನೀರಿನ ಭವಣೆಯಿಂದ ಜನ ಯಾವ ರೀತಿ ಕಷ್ಟ ಅನುಭವಿಸುತ್ತಿದ್ದಾರೆಂಬುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಕೆರೆ ಅಭಿವೃದ್ಧಿಯಾದರೆ ಮಳೆ ನೀರು ಸಂಗ್ರಹಣೆಯಾಗುವುದರಿಂದ ಪ್ರಾಣಿ ಪಕ್ಷಿಗಳಿಗೆ ಜಾನುವಾರುಗಳಿಗೆ ಮತ್ತು ಜನಗಳಿಗೆ ಮತ್ತು ಅಕ್ಕಪಕ್ಕದ ತೋಟ ಮತ್ತು ಹೊಲಗಳಲ್ಲಿರುವ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸ್ ಗೌಡ ಮಾತನಾಡಿ, ಒಂದೇ ಒಂದು ದಿನ ನಡೆದ ಗ್ರಾಮಸ್ಥರ ಸಭೆಯಲ್ಲಿ ಹೂಳೆತ್ತುವ ಕಾಮಗಾರಿಗೆ ದೇಣಿಗೆ ಸಂಗ್ರಹವಾಗಿದೆ. ಟ್ರಾಕ್ಟರ್, ಜೆಸಿಬಿ, ಟಿಪ್ಪರ್‌ವಾಹನಗಳು 200ಕ್ಕೂ ಹೆಚ್ಚು ಕಾಮಗಾರಿಯಲ್ಲಿ ಉಚಿತವಾಗಿ ತೊಡಗಿಸಿಕೊಳ್ಳುವುದಾಗಿ ವಾಹನ ಮಾಲೀಕರು ತಿಳಿಸಿದ್ದಾರೆ. ಪಕ್ಷಾತೀತವಾಗಿ ಕೆರೆ ಹೂಳೆತ್ತುವ ಕಾಮಗಾರಿ ಮಾಡುತ್ತಿದ್ದೇವೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos