ರಸ್ತೆ ಬದಿಯಲ್ಲಿ ಸಾಲುಗಟ್ಟಲೆ ಒಲೆ!

ರಸ್ತೆ ಬದಿಯಲ್ಲಿ ಸಾಲುಗಟ್ಟಲೆ ಒಲೆ!

ತಿರುವನಂತಪುರಂ: ‘ಅಟ್ಟುಕಳ್ ಪೊಂಗಲಾ’ ಎಂಬುದು ಕೇರಳದ ಮಹಿಳೆಯರು ಆಚರಿಸುವ ವಾರ್ಷಿಕ ಹಬ್ಬ. ಕೇರಳದ ತಿರುವನಂತಪುರಂನಲ್ಲಿರುವ ಅಟ್ಟುಕಳ್ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇವಿಗೆ ಪ್ರಿಯವಾದ ಸಿಹಿ ಪೊಂಗಲ್ ಅನ್ನು ತಯಾರಿಸುವುದು ಎಂದಿನಿಂದಲೂ ನಡೆದುಕೊಂಡು ಬರುತಿರುವ ಪದ್ಧತಿ.

ರಸ್ತೆಯಲ್ಲಿ ಸಾಲು ಸಾಲು ಒಲೆಗಳನ್ನು ಇಟ್ಟು ಲಕ್ಷಗಟ್ಟಲೆ ಮಹಿಳೆಯರು ಸಿಹಿ ಪೊಂಗಲ್ ಮಾಡುವುದನ್ನು ನೋಡುವುದೇ ಕಣ‍್ಣಿಗೆ  ಚೆಂದ. ಈ ಹಬ್ಬ ಶುರುವಾಗಿದ್ದು, ನಗರದ ಸುತ್ತ ಬಿಗಿಭದ್ರತೆ ಆಯೋಜಿಸಲಾಗಿದೆ.

ಈ ಹಬ್ಬಕ್ಕೆ ಸುಮಾರು 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ‘ಅಟ್ಟುಕಲ್ ಪೊಂಗಾಲಾ ಹಬ್ಬ’ ನಡೆಯುವ ಸ್ಥಳದಲ್ಲಿ 300 ಕ್ಕೂ ಹೆಚ್ಚು ರೈಲ್ವೇ ಪೊಲೀಸ್ ಫೋರ್ಸ್ ನಿಯೋಜಿಸಲಾಗಿದೆ. 100 ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.\

ಅಟ್ಟುಕಳ್ ಪೊಂಗಲಾ ಹಬ್ಬವನ್ನು ಪ್ರತೀ ವರ್ಷ ಮಲಯಾಳಂನ ಮಕರ ಅಥವಾ ಕುಂಭ ಮಾಸದಲ್ಲಿ ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಇದು ಫೆಬ್ರವರಿ ಇಲ್ಲವೇ ಮಾರ್ಚ್ ತಿಂಗಳಿನಲ್ಲಿ ಬೀಳುತ್ತದೆ. ಹತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಇಷ್ಟಾರ್ಥ ಈಡೇರಿಸುವಂತೆ ಅಟ್ಟುಕಳ್ ಭಾಗ್ಯವತಿ ದೇವಿಯನ್ನು ಪ್ರಾರ್ಥಿಸಲಾಗುತ್ತದೆ. ಲಕ್ಷಾಂತರ ಮಹಿಳೆಯರು ಒಂದೆಡೆ ಸೇರಿ ಈ ಹಬ್ಬವನ್ನು ಆಚರಿಸುವ ಕಾರಣ ವಿಶ್ವಪ್ರಸಿದ್ಧಿ ಪಡೆದಿದೆ.
ಹಬ್ಬದ ನಿಮಿತ್ತ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದ್ದು, ರಸ್ತೆಯಲ್ಲಿ ಸಾಲು ಸಾಲು ಒಲೆಗಳನ್ನು ಹಾಕುವ ಕಾರಣ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಅಟ್ಟುಕಲ್ ದೇವಿ ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಅನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರಿಸರಸ್ನೇಹಿ ಹಬ್ಬ ಆಚರಣೆಗೆ ಕೆಲವು ಶಿಷ್ಟಾಚಾರವನ್ನು ಜಾರಿಗೊಳಿಸಲಾಗಿದ್ದು, ಅವುಗಳನ್ನು ಉಲ್ಲಂಘಿಸದಂತೆ ಗಮನ ವಹಿಸಲು 500 ಸದಸ್ಯರ ತಂಡವನ್ನು ರಚಿಸಲಾಗಿದೆ.
ಕೆಎಸ್ ಆರ್ ಟಿಸಿಯಿಂದ ಶಟಲ್ ಸರ್ವಿಸ್: 

ಹಬ್ಬದಲ್ಲಿ ಭಾಗವಹಿಸಲು ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು(ಕೆಎಸ್ ಆರ್ ಟಿಸಿ) ಶಟಲ್ ಸೇವೆಯನ್ನು ಆರಂಭಿಸಿದ್ದು, ಪ್ರಯಾಣಿಕರ ಸಹಾಯಕ್ಕೆ ವಿಶೇಷ ನಿಯಂತ್ರಣಾ ಕೊಠಡಿಯನ್ನೂ ಆರಂಭಿಸಲಾಗಿದೆ. ಈಸ್ಟ್ ಫೋರ್ಟ್ ನಿಂದ ಅಟ್ಟುಕಳ್ ಗೆ ಶಟಲ್ ಸೇವೆ ನೀಡಲಾಗಿದೆ.
ಮಕ್ಕಳ ಮೇಲ್ವಿಚಾರಣೆಗೆ ವಿಶೇಷ ವ್ಯವಸ್ಥೆ

ಹಬ್ಬದ ಆಚರಣೆಯಲ್ಲಿ ತೊಡಗಿರುವ ತಾಯಂದಿರಿಗೆ ಅನುಕೂಲವಾಗಲು ಅವರ ಮಕ್ಕಳ ಬಗ್ಗೆ ನಿಗಾ ವಹಿಸಲು ವಿಶೇಷ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ. ಮಕ್ಕಳ ಮೇಲ್ವಿಚಾರಣೆಗಾಗಿಯೇ ವಿಶೇಷ ತಂಡ ನಿಯೋಜಿಸಲಾಗಿದೆ. ಎಲ್ಲೂ ನೀರಿನ ಸಮಸ್ಯೆಯೂ ಕಾಡದಂತೆ ವ್ಯವಸ್ಥೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos