ಸಮಸ್ಯೆ ಅರಿಯಲು ಕೆಡಿಪಿ ಸಭೆ ಸಹಾಯ

ಸಮಸ್ಯೆ ಅರಿಯಲು ಕೆಡಿಪಿ ಸಭೆ ಸಹಾಯ

ಶಿರಾ:ಕಡ್ಡಾಯ ಶಿಕ್ಷಣ ನೀತಿ ಇರುವುದೇ ಸಾಕ್ಷರರ ಸಂಖ್ಯೆ ಹೆಚ್ಚಿಸಲು. ಸ್ವತಂತ್ರ ಬಂದ ನಂತರವೂ ೧೫-೫೦ ವರ್ಷ ವಯಸ್ಸಿನ ಸುಮಾರು ೩೩ಸಾವಿರಕ್ಕೂ ಹೆಚ್ಚಿನ ಜನ ಶಿರಾ ತಾಲ್ಲೂಕಿನಲ್ಲಿ ಅನಕ್ಷರಸ್ತರು ಇದ್ದಾರೆ ಎಂದರೆ ಅದು ಸರ್ಕಾರಕ್ಕೆ ಅವಮಾನ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ವೇಳೆ, ವಯಸ್ಕರ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ ತಾಲ್ಲೂಕಿನಲ್ಲಿ ೩೩೪೭೪ ಜನ ಅನಕ್ಷರಸ್ತರು ಇದ್ದಾರೆ ಎಂದು ಮಾಹಿತಿ ನೀಡಿದ್ದು, ಸಚಿವರನ್ನು ಕೆರಳಿಸಿತ್ತು. ಕಡ್ಡಾಯ ಶಿಕ್ಷಣ ನೀತಿ ಅನುಷ್ಟಾನಕ್ಕೆ ಬಂದು ೩೫ ವರ್ಷ ಕಳೆಯುತ್ತಿರುವ ಸಮಯದಲ್ಲೂ ಈ ಮಟ್ಟಿನ ಅನಕ್ಷತೆ ಇದೆ ಎಂದರೆ, ಶಿಕ್ಷಣ ಇಲಾಖೆ ಏನು ಮಾಡ್ತಿದೆ? ಹೀಗಿರೋಕೆ ಸಾಧ್ಯವೇನ್ರಿ ಎಂದು ಅಧಿಕಾರಿಗಳನ್ನೇ ಮರು ಪ್ರಶ್ನಿಸಿದರು.

ಇದು ೨೦೧೧ರ ಜನಗಣತಿ ರೀತ್ಯಾ ಮಾಹಿತಿ, ಆನ್‌ಲೈನ್ ನಲ್ಲಿ ಇರುವುದು ಎಂದು ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿದರು. ಈಗಿನ ಮಾಹಿತಿ ಕೇಳಿದರೆ, ಆನ್‌ಲೈನ್ ಅನ್ತೀರಲ್ರೀ. ಹೋಗ್ಲಿ ಆನ್‌ಲೈನ್‌ನಲ್ಲಿ ಮಾಹಿತಿ ಹಾಕುವವರು ಯಾರು? ಅವರು ಹಾಕಿದ ಮಾಹಿತಿ ಸರಿ ಇದೇ ಎನ್ನುವುದು ಖಚಿತವೇ ಎನ್ನುವ ಪ್ರಶ್ನೆಗೆ ಅಧಿಕಾರಿಗಳ ಮೌನವೇ ಉತ್ತರವಾಗಿತ್ತು.

ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ ಬಯಸಿದ ಸಚಿವರಿಗೆ ಅಧಿಕಾರಿಗಳ ಉತ್ತರ ಬೇಸರ ತರಿಸಿದ್ದು, ಪ್ರತಿ ವರ್ಷವೂ ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಮಕ್ಕಳು ಪಾಸ್ ಆಗಿ ಹೋಗುವಾಗ ಹಳೆಯ ವರ್ಷಕ್ಕೆ ಏನಾದರೂ ವ್ಯತ್ಯಾಸ ಆಗಿದೆಯೇ? ಡ್ರಾಪ್ ಔಟ್ ಏತಕ್ಕಾಗಿ ಆಗುತ್ತಿದೆ. ಯಾವ ವರ್ಗದ ಮಕ್ಕಳಲ್ಲಿ ಈ ಸಮಸ್ಯೆ ಇದೆ. ಅದಕ್ಕೆ ಸರ್ಕಾರ ಏನು ಪರ್ಯಾಯ ರೂಪಿಸಬೇಕು ಎನ್ನುವುದನ್ನು ಯೋಚಿಸಿ, ಯೋಜನೆ ರೂಪಿಸುವುದಕ್ಕಾಗಿ ಕೆಡಿಪಿ ಸಭೆಗಳು ನಡೆಯುವುದು. ಸರಿಯಾದ ಮಾಹಿತಿ ಕೊಡಿ ಎಂದು ಸಚಿವರು ಸೂಚಿಸಿದರು.

ಕೃಷಿ ಇಲಾಖೆ ಮಾಹಿತಿ ಪಡೆದ ವೇಳೆ ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ನಿಗದಿತ ಗುರಿಗಿಂತ ಹೆಚ್ಚುವರಿ ಶೇಂಗಾ ಬಿತ್ತನೆ ಆಗಿರುವುದನ್ನು ಗಮನಿಸಿ, ಅದಕ್ಕೆ ಅಗತ್ಯವಾದ ರಸಗೊಬ್ಬರ ದಾಸ್ತಾನು ಇದೆಯೇ? ಸೊಸೈಟಿಗಳಲ್ಲಿ ಕೆಲವು ಗೊಬ್ಬರ ಖಾಲಿಯಾಗಿದ್ದು, ಖಾಸಗಿ ಅಂಗಡಿಗಳಲ್ಲಿ ಮಾತ್ರ ಸಿಗುತ್ತಿದೆ. ಇದರ ಹಿಂದೆ ಏನಾದರೂ ಸ್ಕೀಮ್ ಇದೆಯೇ? ಇದನ್ನು ಸರಿಮಾಡಿಕೊಳ್ಳಲು ಮುಂಜಾಗ್ರತೆಯಾಗಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಲಹೆ ನೀಡಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos