ಕೆಸಿ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

ಕೆಸಿ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

ನವದೆಹಲಿ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನ ವಿವಿಧ ಕೆರೆಗಳಲ್ಲಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕರ್ನಾಟಕದ 1300ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಕೋರಮಂಗಲ-ಚಲ್ಲಘಟ್ಟ(ಕೆಸಿ ವ್ಯಾಲಿ) ಯೋಜನೆಗೆ ಸುಪ್ರೀಂ ಕೋರ್ಟ್ ಇಂದು ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಈ ಯೋಜನೆಗೆ ವ್ಯಕ್ತವಾಗಿದ್ದ ತೀವ್ರ ವಿರೋಧ ಮತ್ತು ಪ್ರತಿಭಟನೆಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ. ಕೆಸಿ ವ್ಯಾಲಿ ಯೋಜನೆ ಸಂಬಂಧ ಜಾರಿಯಲ್ಲಿ ಇದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಇಂದು ತೆರವುಗೊಳಿಸಿದೆ.

ಇದರಿಂದಾಗಿ ಬೆಂಗಳೂರಿನಿಂದ ಶುದ್ಧೀಕರಿಸಲ್ಪಟ್ಟ ಕೆರೆಗಳ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಿ ಅಂತರ್ಜಲ ಗುಣಮಟ್ಟ ಹೆಚ್ಚಳ ಮತ್ತು ನೀರಿನ ಸಮಸ್ಯೆ ನಿವಾರಿಸುವ ರಾಜ್ಯ ಸರ್ಕಾರದ ಯೋಜನೆ ನಿರ್ವಿಘ್ನವಾಗಿದೆ. ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೆಸಿ ವ್ಯಾಲಿ ಯೋಜನೆಯಡಿ ಪೂರೈಸುವ ಜಲದ ಶುದ್ಧೀಕರಣವನ್ನು ಖಾತ್ರಿಗೊಳಿಸುವಂತೆ ಕೋರಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಕರ್ನಾಟಕ ಹೈಕೋರ್ಟ್‍ಗೆ ಮೊರೆ ಹೋಗಿತ್ತು. ಶುದ್ಧತೆಗೆ ಸಂಬಂಧಪಟ್ಟಂತೆ ಪುರಾವೆಗಳು ಹಾಗೂ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಬೇಕೆಂದು ಸಮಿತಿ ತನ್ನ ಅರ್ಜಿಯಲ್ಲಿ ಆಗ್ರಹಿಸಿತ್ತು. ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಈ ಸಂಬಂಧ ಜಾರಿಯಲ್ಲಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸಿದೆ. ಈ ಹಿಂದೆ ಕೆಸಿ ವ್ಯಾಲಿ ಯೋಜನೆ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ಅನುಮತಿಗೆ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿ ರಾಜ್ಯ ಸರ್ಕಾರ, ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೋಟಿಸ್ ನೀಡಿ ಈ ಯೋಜನೆಯಡಿ ನೀರು ಶುದ್ಧೀಕರಣಕ್ಕೆ ಸಂಬಂಧಪಟ್ಟ ಸ್ವವಿವರಗಳನ್ನು ನೀಡಬೇಕೆಂದು ಸೂಚಿಸಿತ್ತು. ದೀರ್ಘಕಾಲದಿಂದ ಕಾನೂನು ಸಂಘರ್ಷಕ್ಕೆ ಕಾರಣವಾಗಿದ್ದ ಕೆಸಿ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್ ಈಗ ಗ್ರೀನ್ ಸಿಗ್ನಲ್ ನೀಡಿದ್ದು ರಾಜ್ಯ ಸರ್ಕಾರಕ್ಕೆ ಇದ್ದ ಅಡ್ಡಿ ಆತಂಕಗಳು ನಿವಾರಣೆಯಾದಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos