ಕೆ.ಸಿ.ರೆಡ್ಡಿ ಪುತ್ಥಳಿ ನಿರ್ಮಾಣಕೆ ನಿರ್ಧಾರ

ಕೆ.ಸಿ.ರೆಡ್ಡಿ ಪುತ್ಥಳಿ ನಿರ್ಮಾಣಕೆ ನಿರ್ಧಾರ

ಕೋಲಾರ: ರಾಜ್ಯದ ಪ್ರಥಮ ಮುಖ್ಯಮಂತ್ರಿ ಮತ್ತು ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ದಿವಂಗತ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ಕೋಲಾರ ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕರೂ ಹಾಗೂ ಇಪ್ಕೋ ಟೋಕಿಯೋ ವಿಮಾ ಸಂಸ್ಥೆ ಅಧ್ಯಕ್ಷರೂ ಆದ ಕೆ.ಶ್ರೀನಿವಾಸಗೌಡ ತಿಳಿಸಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್‌ನಿಂದ ನಡೆದ ೬೭ನೇ ಸಹಕಾರ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಜಿಲ್ಲೆಯವರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದರು ಆದರೆ ಅವರ ನೆನಪಿನಲ್ಲಿ ಜಿಲ್ಲೆಯಲ್ಲಿ ಏನನ್ನೂ ಮಾಡಲಿಲ್ಲ, ಕೆ.ಸಿ.ರೆಡ್ಡಿ ಅವರು ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೆಲಸ ಮಾಡಿ ರೈತರಿಗೆ ಅನುಕೂಲ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ನೆನಪಿಗಾಗಿ ಪುತ್ಥಳಿಯನ್ನು ನಿರ್ಮಿಸಲು ನಿರ್ಧರಿಸಿದ್ದು, ಜಿಲ್ಲೆಯ ಎಲ್ಲಾ ಸಹಕಾರಿಗಳು ಹಾಗೂ ಸಹಕಾರ ಸಂಸ್ಥೆಗಳು ಸಹಕಾರ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯ ಸಹಕಾರ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲು ಯುವಕರು ಮುಂದಾಳತ್ವ ವಹಿಸಬೇಕು, ನಂಬಿಕೆ,ವಿಶ್ವಾಸ, ಪಾರದರ್ಶಕ ವ್ಯವಹಾರದ ಮೂಲಕ ಸಹಕಾರಿ ರಂಗವನ್ನು ಮತ್ತಷ್ಟು ಬಲಗೊಳಿಸಬೇಕು. ತಾವಿಂದು ಅಂತರಾಷ್ಟ್ರೀಯ ಮಟ್ಟದ ಇಫ್ಕೋ-ಟೊಕಿಯೋ ಸಂಸ್ಥೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವುದಕ್ಕೆ ಅಣ್ಣಿಹಳ್ಳಿಯ ಸಹಕಾರ ಸಂಸ್ಥೆ ಕಾರಣ, ಜಿಲ್ಲೆಯಲ್ಲಿ ಅನೇಕರು ನನ್ನಂತೆ ಸಹಕಾರ ಕ್ಷೇತ್ರದ ಮೂಲಕ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಷ್ಟದಿಂದ ಮುಚ್ಚುವ ಹಂತ ತಲುಪಿದ್ದ ಡಿಸಿಸಿ ಬ್ಯಾಂಕ್‌ಗೆ ಬ್ಯಾಲಹಳ್ಳಿಹಳ್ಳಿ ಗೋವಿಂದಗೌಡ ಸಾರಥ್ಯವಹಿಸಿಕೊಂಡು ಜೀವ ತುಂಬಿದ್ದಾರೆ, ಇದೀಗ ಬ್ಯಾಂಕಿನ ಬಗ್ಗೆ ರೈತರು, ಮಹಿಳೆಯರಲ್ಲಿ ನಂಬಿಕೆ,ವಿಶ್ವಾಸ ಹೆಚ್ಚಾಗುವಂತಾಗಿದೆ. ನಿಜ ಹೇಳಬೇಕೆಂದರೆ ನನಗೆ ಗೋವಿಂದಗೌಡ ಅಧ್ಯಕ್ಷನಾದರೆ ನಿಬಾಯಿಸುವುದು ಕಷ್ಟವಾಗಬಹುದೆಂದು ಬೇರೆಯವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದೆ. ಆದರೆ ನನ್ನ ನಿರೀಕ್ಷೆಗೂ ಮೀರಿ ಬ್ಯಾಂಕಿನ ಅಭಿವೃದ್ದಿ ಮಾಡಿದ್ದಾರೆ ಎಂದು ಪ್ರಶಂಶಿಸಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಟವಾಗಿದೆ ಎಂಬುದಕ್ಕೆ ಕೋಚಿಮುಲ್ ಹಾಗೂ ಡಿಸಿಸಿ ಬ್ಯಾಂಕ್ ಸಾಧನೆಯೇ ಸಾಕ್ಷಿಯಾಗಿದೆ. ಮುಳುಗಿದ್ದ ಡಿಸಿಸಿ ಬ್ಯಾಂಕ್ ಕಳೆದ ೭ ವರ್ಷಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ೩೬ ಸಾವಿರಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳಿಗೆ, ೧೮೨೩ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಗೂ ರೈತರಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದೆ, ಅದೇ ರೀತಿ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ೨ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಪ್ರತಿದಿನ ೧೦ ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಸರಬರಾಜು ಆಗುತ್ತಿದೆ, ಚಿಕ್ಕಬಳ್ಳಾಪುರದಲ್ಲಿ ೨೦೦ ಕೋಟಿ ರೂ.ವೆಚ್ಚದಲ್ಲಿ ಮೇಗಾ ಡೇರಿಯನ್ನು ನಿರ್ಮಿಸಲಾಗಿದ್ದು ಕೋಲಾರದಲ್ಲೂ ೨೦೦ ಕೋಟಿ ರೂ. ವೆಚ್ಚದಲ್ಲಿ ಎಂ.ವಿ.ಕೃಷ್ಣಪ್ಪ ಮೇಗಾ ಡೇರಿ ಸ್ಥಾಪನೆಗೆ ನಿರ್ಧರಿಸಲಾಗಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos