ಯಡಿಯೂರಪ್ಪರಿಂದ ಬಿಜೆಪಿ ಪಕ್ಷಕ್ಕೆ ಮುಜುಗರ: ಕೆ.ಬಿ.ಶಾಣಪ್ಪ

ಯಡಿಯೂರಪ್ಪರಿಂದ ಬಿಜೆಪಿ ಪಕ್ಷಕ್ಕೆ ಮುಜುಗರ: ಕೆ.ಬಿ.ಶಾಣಪ್ಪ

ಕಲಬುರ್ಗಿ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಬಿ.ಎಸ್.ಯಡಿಯೂರಪ್ಪ ಅವರು ಸಂಖ್ಯಾ ಬಲವಿಲ್ಲದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಹಾಗೂ ದೇವದುರ್ಗದಲ್ಲಿ ಆಪರೇಷನ್‌ ಕಮಲಕ್ಕೆ ಕೈ ಹಾಕಿದ್ದರಿಂದ ಪಕ್ಷಕ್ಕೆ ಬಹಳಷ್ಟು ಮುಜುಗರವಾಗಿದೆ’ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ ಆರೋಪಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸಹಜವಾಗಿ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದರು. ಸಂಖ್ಯಾ ಬಲವಿಲ್ಲದ ಕಾರಣ ನಾವು ವಿರೋಧ ಪಕ್ಷದಲ್ಲಿ ಇರಬೇಕಾಗಿತ್ತು. ಆದರೆ, ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ದಿನದಲ್ಲಿ ರಾಜೀನಾಮೆ ಸಲ್ಲಿಸಿದರು. ಯಡಿಯೂರಪ್ಪ ಅವರ ಈ ನಡೆಯಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ’ ಎಂದು ಪುನರಚ್ಚರಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜೈಲಿಗೆ ಹೋಗಿ ಬಂದದ್ದು ಅತ್ಯಂತ ದುರ್ದೈವದ ಸಂಗತಿ. ಆಪರೇಷನ್ ಕಮಲ ಆರೋಪ ಕೇಳಿ ಬಂದಾಗ ಯಡಿಯೂರಪ್ಪ ದೊಡ್ಡ ಮನುಷ್ಯನಾಗಿ ಇಂತಹ ಕೆಲಸ ಮಾಡುವುದಿಲ್ಲ ಎಂದು ನಂಬಿದ್ದೆ. ಯಾವಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಡಿಯೂರಪ್ಪ ಮಾತನಾಡಿದ ಆಡಿಯೋ ಬಿಡುಗಡೆ ಮಾಡಿದರೋ ಆಗ ದಿಗಿಲುಗೊಂಡೆ. ಇದು ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ನೋವಿನ ಸಂಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಹಾಗೂ ಪಕ್ಷದ ಇತರ ಮುಖಂಡರು ‘ನಮ್ಮ ನಡೆ ಶೋಷಿತರ ಕಡೆ’ ಎಂಬ ಹೆಸರಿನಲ್ಲಿ ದಲಿತರ ಮನೆಯಲ್ಲಿ ಊಟ ಮಾಡಲು ಮುಂದಾದರು. ಇದರಿಂದ ನನ್ನ ಸ್ವಾಭಿಮಾನಕ್ಕೆ ತೀವ್ರ ಪೆಟ್ಟು ಬಿತ್ತು. ಪಕ್ಷದಲ್ಲಿ ಆಂತರಿಕವಾಗಿ ಈ ಬಗ್ಗೆ ತಕರಾರು ಎತ್ತಿದೆ. ಆದರೆ, ಪ್ರಯೋಜನವಾಗಲಿಲ್ಲ. ಪಕ್ಷದ ಶಿಸ್ತನ್ನು ಮೀರಬಾರದು ಎಂಬ ಕಾರಣಕ್ಕೂ ಎಲ್ಲವನ್ನೂ ಸಹಿಸಿಕೊಂಡು ಬಂದೆ. ಇದು ದಲಿತರಿಗೆ ಮಾಡಿರುವ ಮೋಸವಾಗಿದೆ. ಬಿಜೆಪಿಗೆ ಯಾವತ್ತೂ ದಲಿತರ ಅಭಿವೃದ್ಧಿ ಬೇಕಿಲ್ಲ’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಫ್ರೆಶ್ ನ್ಯೂಸ್

Latest Posts

Featured Videos