ಜಯಂತ್ ಕಾಯ್ಕಿಣಿ ಕೃತಿಗೆ ಪ್ರತಿಷ್ಠಿತ ಡಿ ಎಸ್ ಸಿ ಪ್ರಶಸ್ತಿ

  • In Sahitya
  • January 26, 2019
  • 232 Views
ಜಯಂತ್ ಕಾಯ್ಕಿಣಿ ಕೃತಿಗೆ ಪ್ರತಿಷ್ಠಿತ ಡಿ ಎಸ್ ಸಿ ಪ್ರಶಸ್ತಿ

ಕೋಲ್ಕತಾ: ಜನಪ್ರಿಯ ಕನ್ನಡ ಸಾಹಿತಿ ಜಯಂತ್ ಕಾಯ್ಕಿಣಿ 2018ರ ಸಾಲಿನ ದಕ್ಷಿಣ ಏಶ್ಯ ಸಾಹಿತ್ಯಕ್ಕಾಗಿನ ಡಿಎಸ್‌ಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರ ಅನುವಾದಿತ ಕೃತಿ ” ನೋ ಪ್ರೆಸೆಂಟ್ಸ್ ಪ್ಲೀಸ್’ಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ. ಕೋಲ್ಕತಾ ಪ್ರಖ್ಯಾತ ವಿಕ್ಟೋರಿಯಾ ಸ್ಮಾರಕ ಸಭಾಭವನದಲ್ಲಿ ಶುಕ್ರವಾರ ನಡೆದ ‘ಟಾಟಾ ಸ್ಟೀಲ್ ಕೋಲ್ಕತಾ ಸಾಹಿತ್ಯ ಸಮ್ಮೇಳನ’ದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಯಿತು.

ಜಯಂತ್ ಕಾಯ್ಕಿಣಿ ಹಾಗೂ ಅನುವಾದಕಿ ತೇಜಸ್ವಿ ನಿರಂಜನ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

 ಹಿರಿಯ ಆಂಗ್ಲ ಸಾಹಿತಿ ರಸ್ಕಿನ್ ಬಾಂಡ್ ಪ್ರಶಸ್ತಿ ಪ್ರದಾನ ಮಾಡಿದರು. ಅನುವಾದಿತ ಕೃತಿಯೊಂದು 25 ಸಾವಿರ ಡಾಲರ್ ಮೊತ್ತದ ಡಿಎಸ್‌ಸಿ ಪ್ರಶಸ್ತಿಯನ್ನು ಪಡೆದಿರುವುದು ಇದೇ ಮೊದಲ ಸಲವಾಗಿದೆ.

ಹಲವಾರು ದ್ವಂದ್ವಗಳ ಹೊರತಾಗಿಯೂ,ಚೈತನ್ಯಶೀಲತೆಯನ್ನು ಮೈಗೂಡಿಸಿಕೊಂಡಿರುವ, ಸಮಸ್ಯೆಗಳಿಂದ ಜರ್ಝರಿತವಾಗಿದ್ದರೂ ಹೃದಯ ವೈಶಾಲ್ಯತೆಯುಳ್ಳ ಮುಂಬೈ ಮಹಾನಗರದ ಕಥೆಯನ್ನು ”ನೋ ಪ್ರೆಸೆಂಟ್ಸ್ ಪ್ಲೀಸ್” ಕೃತಿಯು ಲವಲವಿಕೆಯೊಂದಿಗೆ ಹೇಳಿದೆಯೆಂದು ಪ್ರಶಸ್ತಿ ಘೋಷಣೆಯ ಸಂದರ್ಭದಲ್ಲಿ ನಿರೂಪಕರು ವಿವರಿಸಿದರು.

ಅನುಭೂತಿ ಹಾಗೂ ಅಸ್ತಿತ್ವಕ್ಕಾಗಿನ ಹೋರಾಟವು ಈ ಅಸಾಧಾರಣ ಕೃತಿಯ ಪ್ರತಿಯೊಂದು ಎಳೆಯನ್ನು ಒಗ್ಗೂಡಿಸುವ ಥೀಮ್‌ಗಳಾಗಿವೆ. ಎಷ್ಟು ಮೃದುವಾಗಿದೆಯೋ, ಕೆಲವು ಸಂದರ್ಭಗಳಲ್ಲಿ ಅಷ್ಟೇ ಕ್ರೂರವಾಗಿ ವರ್ತಿಸುವ ಈ ಮಹಾನಗರದ ಸ್ಪಷ್ಟವಾದ ನೋಟವನ್ನು ಈ ಕೃತಿಯು ನೀಡಿದೆ ಎಂದು ಡಿಎಸ್‌ಸಿ ಸಮೂಹ ಹೇಳಿಕೆಯಲ್ಲಿ ತಿಳಿಸಿದೆ.

‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿಯನ್ನು ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿದೆ.

ನೋ ಪ್ರೆಸೆಂಟ್ಸ್ ಪ್ಲೀಸ್ ಕೃತಿಯಲ್ಲಿ ಜಯಂತ್ ಕಾಯ್ಕಿಣಿ ಅವರು ಮುಂಬೈ ನಗರ ಬದುಕಿನ ಚಿತ್ರಣವನ್ನು ಸುಸಂಬದ್ಧ ನಿರೂಪಿಸಿರುವುದು ತೀರ್ಪುಗಾರ ಸಮಿತಿಗೆ ತುಂಬಾ ಮೆಚ್ಚುಗೆಯಾಗಿದೆ ಎಂದು ತೀರ್ಪುಗಾರ ಮಂಡಳಿಯ ಅಧ್ಯಕ್ಷ ರುದ್ರಾಂಶು ಮುಖರ್ಜಿ ತಿಳಿಸಿದ್ದಾರೆ.

ಅನುವಾದಿತ ಕೃತಿಯೊಂದಕ್ಕೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಇದೇ ಮೊದಲ ಸಲವಾಗಿದೆ. ಅನುವಾದಕಿ ತೇಜಸ್ವಿನಿ ನಿರಂಜನ ಅವರ ಅಸಾ ಧಾರಣ ಕೊಡುಗೆಯನ್ನು ತೀರ್ಪುಗಾರರು ಪರಿಗಣಿಸಿರುವುದಾಗಿ ಅವರು ಹೇಳಿದ್ದಾರೆ. ರುದ್ರಾಂಶು ಮುಖರ್ಜಿ ಹೊರತಾಗಿ, ನಂದನಾ ಸೇನ್, ಕ್ಲೇರ್ ಆರ್ಮಿಸ್ಟೆಡ್, ಟಿಸ್ಸಾ ಜಯತಿಲಕ ಹಾಗೂ ಫಿರ್ದೂಸ್ ಆಝ್ಮಿ ತೀರ್ಪುಗಾರ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಕಾಮಿಲಾ ಶಾಮ್ಸಿ (ಹೋಮ್ ಫೈರ್), ಮನುಜೋಸೆಫ್ (ಮಿಸ್ ಲೈಲಾ ಆರ್ಮ್‌ಡ್ ಆಯಂಡ್ ಡೇಂಜರಸ್), ಮೊಹ್ಸಿನ್ ಅಹ್ಮದ್ (ಎಕ್ಸಿಟ್ ವೆಸ್ಟ್), ನೀಲ್ ಮುಖರ್ಜಿ (ಎ ಸ್ಟೇಟ್ ಆಫ್ ಫ್ರೀಡಂ) ಹಾಗೂ ಸುಜಿತ್ ಸರಾಫ್ (ಹರಿಲಾಲ್ ಆಯಂಡ್ ಸನ್ಸ್) ಅವರು ಡಿಎಸ್‌ಸಿ ಸಾಹಿತ್ಯ ಪ್ರಶಸ್ತಿ ಸ್ಪರ್ಧೆಯ ಅಂತಿಮ ಪಟ್ಟಿಯಲ್ಲಿದ್ದ ಇತರ ಬರಹಗಾರರಾಗಿದ್ದಾರೆ.

2010ರಲ್ಲಿ ಸ್ಥಾಪನೆಯಾದ ದಕ್ಷಿಣ ಏಶ್ಯ ಸಾಹಿತ್ಯಕ್ಕಾಗಿನ ಡಿಎಸ್‌ಸಿ ಪ್ರಶಸ್ತಿಯನ್ನು, ಪ್ರತಿ ವರ್ಷ ದಕ್ಷಿಣ ಏಶ್ಯದಲ್ಲಿ ಪ್ರಕಟವಾಗುವ ಅತ್ಯುತ್ತಮ ಕಾದಂಬರಿ ಸಾಹಿತ್ಯಕ್ಕಾಗಿ ನೀಡಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos