ಕಸ್ತೂರಿ ರಂಗನ್ ವರದಿ: ನಕ್ಸಲಿಸಂಗೆ ಸರ್ಕಾರವೇ ಕಾರಣ!?

ಕಸ್ತೂರಿ ರಂಗನ್ ವರದಿ: ನಕ್ಸಲಿಸಂಗೆ ಸರ್ಕಾರವೇ ಕಾರಣ!?

ಮಲೆನಾಡಲ್ಲಿ ನಕ್ಸಲರು ಜನ್ಮ ತಾಳಿದ್ದೆ ಸರ್ಕಾರ, ಅಧಿಕಾರ ಹಾಗೂ ಬಂಡವಾಳ ಶಾಯಿಗಳ ವಿರುದ್ಧ. ಅದಕ್ಕೆ ಕಾಡಲ್ಲಿರೋರ್ಗೆ ನಾಡಲ್ಲಿರೋರು ಸಾಥ್ ನೀಡ್ತಿದ್ರು. 16 ವರ್ಷಗಳ ಪರಿಶ್ರಮದಿಂದ ಮಲೆನಾಡಲ್ಲಿ ಕೆಂಪು ಉಗ್ರರ ಅಟ್ಟಹಾಸವೀಗ ಹತೋಟಿಗೆ ಬಂದಿದೆ. ಆದ್ರೆ, ಮತ್ತದೇ ಕೇಂದ್ರ ಸರ್ಕಾರದ ನೀತಿ ನಕ್ಸಲ್ ಚಟುವಟಿಕೆಗೆ ಗ್ರೀನ್ ಕಾರ್ಪೇಟ್ ಹಾಸಿದೆ. ಕೇಂದ್ರ ಸರ್ಕಾರ ಆ ವರದಿಯನ್ನ ಜಾರಿಗೆ ತಂದ್ರೆ ಮತ್ತೆ ಕಾಡಿಗೋಗೋರು, ಅವರ ಬೆಂಬಲಕ್ಕೆ ನಿಲ್ಲೋರ ಸಂಖ್ಯೆ ಹೆಚ್ಚುದ್ರು ಆಶ್ಚರ್ಯವಿಲ್ಲ. ಯಾಕಂದ್ರೆ, ಮಲೆನಾಡಿನ 147 ಗ್ರಾಮಗಳ ಬದುಕು ಅಡ್ಡಕತ್ತರಿಗೆ ಸಿಲುಕಿದೆ. ಹಾಗಾದ್ರೆ, ಆ ವರದಿ ಏನು, ಬದುಕನ್ನೇ ಕಿತ್ತುಕೊಳ್ಳೊ ಆ ವರದಿ ಯಾವ್ದು, ಎಂತದ್ದು ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ..

ಹೌದು… ಗುಜರಾತಿನ ತಪ್ಪಸ್ವಿ ನದಿಯಿಂದ ಮಹಾರಾಷ್ಟ, ಕರ್ನಾಟಕ, ಕೇರಳ, ಗೋವಾ, ಆಂಧ್ರ ಮೂಲಕ ಹಾದು ಹೋಗುವ ಪಶ್ಚಿಮ ಘಟ್ಟಗಳ ಸಾಲು ಸುಮಾರು 1500ಕ್ಕೂ ಅಧಿಕ ಹಳ್ಳಿಗರ ಪಾಲಿಗೆ ಮರಣ ಶಾಸನವಾಗಿದೆ. ಅದ್ರಲ್ಲಿ ಚಿಕ್ಕಮಗಳೂರಿನ 145 ಗ್ರಾಮಗಳೂ ಇವೆ. ಕಸ್ತೂರಿ ರಂಗನ್ ವರದಿ ಜಾರಿಯ ಪೆಡಂಭೂತ ಮಲೆನಾಡಿಗರ ನಿದ್ದೆ ಗೆಡಿಸಿದ್ರೆ, ಮಲೆನಾಡಲ್ಲಿ ಮತ್ತೆ ನಕ್ಸಲ್ ಚಟುವಟಿಕೆಗೆ ಗರಿಗೆದರುತ್ತಾ ಎಂಬ ಅನುಮಾನ ಬಲವಾಗಿದೆ. ಯಾಕಂದ್ರೆ, ಮಲೆನಾಡಲ್ಲಿ ನಕ್ಸಲ್ ಚಟುವಟಿಕೆ ಆರಂಭವಾಗಿದ್ದೆ ಹಕ್ಕಿಗಾಗಿ, ಬದುಕಿಗಾಗಿ. ಆದ್ರೀಗ, ಅಂತಹ ಬದುಕೆ ಮೂರಾಬಟ್ಟೆ ಸ್ಥಿತಿಗೆ ಬಂದಿರೋದ್ರಿಂದ ಮುಂದೇನೋ ಎಂಬಂತಾಗಿದೆ. ಮಲೆನಾಡಿಗರು ನಮ್ಮನ್ನ ಒಕ್ಕಲೆಬ್ಬಿಸ್ತಾರೆಂಬ ಭಯದಲ್ಲಿ ಬದುಕುತ್ತಿದ್ದಾರೆ. ಮಲೆನಾಡಿನ ಬಹುತೇಕ ಭಾಗ ನಕ್ಸಲ್ ಪೀಡಿತ ಪ್ರದೇಶ. 12 ನಕ್ಸಲರು ಶರಣಾಗತಿಯಾದ್ಮೇಲೆ ಮಲೆನಾಡಲ್ಲಿ ನಕ್ಸಲ್ ಚಟುವಟಿಕೆ ಪ್ರಾಬಲ್ಯ ಕಳೆದುಕೊಂಡಿತ್ತು. ಆದ್ರೀಗ, ಮತ್ತೆ ಕಸ್ತೂರಿ ರಂಗನ್ ವರದಿ ಮೂಲಕ ನಕ್ಸಲಿಸಂಗೆ ಸರ್ಕಾರವೇ ಕಾರಣವಾಗುತ್ತಾ ಎಂಬ ಅನುಮಾನ ಜನಸಾಮಾನ್ಯರನ್ನ ಕಾಡ್ತಿದೆ.

ಪ್ರಕೃತಿ ಹಾಗೂ ಪಶ್ಚಿಮ ಘಟ್ಟದ ಜೀವ-ವೈವಿದ್ಯಗಳನ್ನ ಉಳಿಸೋದು ಕಸ್ತೂರಿ ರಂಗನ್ ವರದಿಯ ಮೂಲ ಉದ್ದೇಶ. ಒಂದು ವೇಳೆ ಈ ವರದಿ ಜಾರಿಗೆ ಬಂದ್ರೆ, ಕಾಫಿನಾಡಿನ 147 ಹಳ್ಳಿಗಳ ಹೆಸರಲ್ಲಿ ಬಹುತೇಕ ಕಾಫಿನಾಡೇ ನಾಶವಾದ್ರು ಆಶ್ಚರ್ಯವಿಲ್ಲ. ಯಾಕಂದ್ರೆ, 147 ಹಳ್ಳಿಯ 10 ಕಿ.ಮೀ. ಸುತ್ತಳತೆಯಲ್ಲಿ ರಾಸಾಯನಿಕ ಬಳಸುವಂತಿಲ್ಲ, ಹೊಸ ರಸ್ತೆ ಮಾಡಂಗಿಲ್ಲ. ಸರ್ಕಾರಿ ಜಾಗ ಮುಟ್ಟಂಗಿಲ್ಲ. ನೈಸರ್ಗಿಕ ನೀರನ್ನೂ ಬಳಸಂಗಿಲ್ಲ, ಮನೆ ಕಟ್ಟಂಗಿಲ್ಲ ಹಾಗೂ ತಂತ್ರಜ್ಞಾನವೂ ನೋ ಎಂಟ್ರಿ. ಎಲ್ಲದಕ್ಕೂ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮತಿ ಬೇಕು. ಹಾಗಾಗಿ, ಈ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಸಲಿಗೆ ಈ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ್ದೇ ಅಲ್ಲ. ಪಶ್ಚಿಮಘಟ್ಟವನ್ನ ತಮ್ಮ ಮುಷ್ಠಿಗೆ ತೆಗೆದುಕೊಳ್ಳಲು ವಿದೇಶಿ ಅನುದಾನ ಪಡೆಯುತ್ತಿರೋ ಎನ್.ಜಿ.ಓಗಳ ಹುನ್ನಾರ ಅಂತಾರೆ ವರದಿಯ ವಿರೋದಿ ಹೋರಾಟಗಾರರು. ಆದ್ದರಿಂದ, ಕಸ್ತೂರಿ ರಂಗನ್ ಹೆಸರಲ್ಲಿ ಮಲೆನಾಡು ಏನಾಗುತ್ತೋ ಹೇಳೋಕೆ ಅಸಾಧ್ಯದಂತಾಗಿದೆ.

ಒಟ್ಟಾರೆ, ಕಸ್ತೂರಿ ರಂಗನ್ ವರದಿ ಹೆಸರಲ್ಲಿ ಮಲೆನಾಡು ಕಾಡಾಗುತ್ತೋ ಅಥವ ಮಲೆನಾಡಾಗೇ ಉಳಿಯುತ್ತೋ ಗೊತ್ತಿಲ್ಲ. ಆದ್ರೆ, ಜನ ಮಾತ್ರ ಹಕ್ಕು ಹಾಗೂ ಬದುಕನ್ನ ಉಳಿಸಿಕೊಳ್ಳೋಕೆ ಎಂತಹಾ ಹೋರಾಟಕ್ಕೂ ಸಜ್ಜಾಗಿದ್ದಾರೆ. ಆದ್ರೆ, ಆ ಹೋರಾಟ ಯಾವ್ದು, ಯಾವ ಮಾರ್ಗದ್ದು ಅನ್ನೋದು ಮಾತ್ರ ನಿಗೂಢ. ನಾವು ಕಾಡಿನ ಮಕ್ಕಳು. ಕಾಡನ್ನ ಉಳಿಸಿ-ಬೆಳೆಸ್ದೋರು. ನಮ್ಮನ್ನ ಖಾಲಿ ಮಾಡಿಸಿ ಕಾಡನ್ನ ಉಳಿಸ್ಬೇಕು ಎಷ್ಟು ಸರಿ ಅನ್ನೋದು ಹಳ್ಳಿಗರ ಪ್ರಶ್ನೆ. ಅದು ಸತ್ಯ ಕೂಡ. ಅದೇನೆ ಇರ್ಲಿ,ಕೇಂದ್ರ ಸರ್ಕಾರದ ನಡೆ, ನಿರ್ಧಾರದಿಂದ ಕಾಡು, ಕಾಡಿನ ಜನ ಎಲ್ಲರೂ ಉಳಿಯುವಂತಾದ್ರೆ ಸಾಕು.

ಫ್ರೆಶ್ ನ್ಯೂಸ್

Latest Posts

Featured Videos