ಕಸಾಯಿಗಳ ಕೈಯಿಂದ ರಕ್ಷಿಸಿದ್ರೂ ಗೋವುಗಳನ್ನು ಸಾಕಲ್ಲ ಎಂದ ಗೋಶಾಲೆಗಳು !

ಕಸಾಯಿಗಳ ಕೈಯಿಂದ ರಕ್ಷಿಸಿದ್ರೂ ಗೋವುಗಳನ್ನು ಸಾಕಲ್ಲ ಎಂದ ಗೋಶಾಲೆಗಳು !

ಫಂಡ್ ಇಲ್ಲವೆಂದು ಗೋವಿನ ಸಾಕಣೆಗೆ ನಿರಾಕರಿಸಿದ ಬಜರಂಗದಳ, ವಿಹಿಂಪ ಮುಖಂಡರು !

ಮಂಗಳೂರು: ಕರಾವಳಿಯಲ್ಲಿ ಗೋ ಕಳ್ಳತನ, ಗೋಹತ್ಯೆ ವಿಚಾರದಲ್ಲಿ ಗಲಾಟೆ ನಡೆದಿದ್ದನ್ನು ಕೇಳಿದ್ದೇವೆ. ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದೊಯ್ದ ವಿಚಾರ ಹಿಂದೂ – ಮುಸ್ಲಿಮರ ಮಧ್ಯೆ ಹಿಂಸೆಗೆ ಕಾರಣವಾಗಿದ್ದನ್ನು ಕಂಡಿದ್ದೇವೆ. ಪೊಲೀಸರು ಗೋ ಹಂತಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೆಂದು ಹಿಂದೂ ಸಂಘಟನೆಗಳು ಬೀದಿ ರಂಪ ಮಾಡಿದ್ದನ್ನೂ ಸಹ ನೋಡಿದ್ದೇವೆ. ಗೋರಕ್ಷಣೆಯ ವಿಚಾರದಲ್ಲಿ ರಂಪಾಟಕ್ಕೆ ವೇದಿಕೆಯಾಗಿರುವ ಹಿಂದೂ ಸಂಘಟನೆಗಳ ಶಕ್ತಿ ಕೇಂದ್ರ ಮಂಗಳೂರಿನಲ್ಲಿ ತದ್ವಿರುದ್ಧ ಘಟನೆಯೊಂದು ನಡೆದಿದ್ದು, ಸಂಘಟನೆಗಳ ಮಾನವನ್ನೇ ಹರಾಜಾಗುವಂತೆ ಮಾಡಿದೆ.

ಮಂಗಳೂರಿನ ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಗಸ್ತಿನಲ್ಲಿದ್ದಾಗ, 10 ಚಕ್ರದ ಕಂಟೇನರ್ ಲಾರಿಯೊಂದು ಅನುಮಾನಾಸ್ಪದ ನೆಲೆಯಲ್ಲಿ ತೆರಳುತ್ತಿದ್ದುದು ಕಂಡುಬಂದಿತ್ತು. ಸುರತ್ಕಲ್ ನಿಂದ ಫಾಲೋ ಮಾಡುತ್ತಾ ಬಂದ ಪೊಲೀಸರು, ಪಂಪ್ ವೆಲ್ ವೃತ್ತದಲ್ಲಿ ಲಾರಿಯನ್ನು ಅಡ್ಡಗಟ್ಟಿದಾಗ, ಮುಚ್ಚಿದ ಕಂಟೇನರ್ ನಲ್ಲಿ ಗೋವುಗಳನ್ನು ತುಂಬಿಕೊಂಡಿದ್ದು ಗಮನಕ್ಕೆ ಬಂದಿದೆ. 24 ದೊಡ್ಡ ಗಾತ್ರದ ಹೈಬ್ರಿಡ್ ತಳಿಯ ಹೋರಿಗಳು ಮತ್ತು ಏಳು ಎಮ್ಮೆಗಳನ್ನು ಒಂದೇ ಲಾರಿಯಲ್ಲಿ ತುಂಬಿಸಲಾಗಿತ್ತು. ಯಾವುದೇ ದಾಖಲೆ ಪತ್ರಗಳಿಲ್ಲದೆ, ಉಸಿರುಕಟ್ಟಿದ ಸ್ಥಿತಿಯಲ್ಲಿ ಸಾಗಿಸುತ್ತಿದ್ದ ಕಾರಣ, ಗೋವುಗಳನ್ನು ಪೊಲೀಸರೇ ರಕ್ಷಣೆ ಮಾಡಿದ್ದರು.

ಹುಬ್ಬಳ್ಳಿಯಿಂದ ಮಂಗಳೂರಿನ ಮೂಲಕ ಕೇರಳಕ್ಕೆ ಸಾಗಿಸಲ್ಪಡುತ್ತಿದ್ದ ಗೋವುಗಳು ಪೊಲೀಸರ ಕಾರ್ಯಾಚರಣೆಯಿಂದ ಬದುಕುಳಿದಿದ್ದವು. ಲಾರಿಯಲ್ಲಿದ್ದ ಇಬ್ಬರು ಮತ್ತು ಲಾರಿಗೆ ಬೆಂಗಾವಲಾಗಿ ಬರುತ್ತಿದ್ದ ಇನ್ನೋವಾ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಬಳಿಕ ಪ್ರಕರಣವನ್ನು ಮಂಗಳೂರಿನ ನಗರ ಠಾಣೆಗೆ ವರ್ಗಾಯಿಸಿದ್ದರು.

ಆದರೆ, ವಶಕ್ಕೆ ಪಡೆದ ಗೋವುಗಳನ್ನು ಸಲಹುವುದು ಪೊಲೀಸರಿಗೆ ಸವಾಲಾಗಿತ್ತು. ಹೀಗಾಗಿ ಮಂಗಳೂರಿನ ಗೋಶಾಲೆಗಳಲ್ಲಿ ಗೋವುಗಳನ್ನು ತಾತ್ಕಾಲಿಕ ನೆಲೆಯಲ್ಲಿ ಇರಿಸಿಕೊಳ್ಳಲು ಪೊಲೀಸರು ಮನವಿ ಮಾಡಿದ್ದರು. ಆದರೆ, ದೊಡ್ಡ ಗಾತ್ರದ ಎತ್ತು ಮತ್ತು ಎಮ್ಮೆಗಳಾಗಿದ್ದರಿಂದ ಅವುಗಳ ಪಾಲನೆಗೆ ಗೋಶಾಲೆಗಳು ನಿರಾಕರಿಸಿದ್ದವು.

ಗೋವುಗಳನ್ನು ಪೊಲೀಸ್ ಠಾಣೆಯಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲದ ಕಾರಣ ಕೊನೆಗೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿಗೆ ಪೊಲೀಸರು ಮನವಿ ಮಾಡಿದ್ದಾರೆ. ಪ್ರಕಾಶ್ ಶೆಟ್ಟಿ ಮರುದಿನ ತನ್ನ ಬಜ್ಪೆ ಬಳಿಯ ಕೆಂಜಾರಿನ ಎಸ್ಟೇಟಿಗೆ ಕೊಂಡೊಯ್ದು ಗೋವುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಿದ್ದಾರೆ.

ಆದರೆ, ಇಲ್ಲಿ ಪ್ರಶ್ನೆ ಇರುವುದು ಗೋ ಹತ್ಯೆ ವಿಚಾರದಲ್ಲಿ ಬೀದಿ ರಂಪ ಮಾಡುವ ಹಿಂದೂ ಸಂಘಟನೆಗಳದ್ದು.
ಗೋ ಕಳ್ಳರನ್ನು ಪೊಲೀಸರು ಹಿಡಿಯಲ್ಲವೆಂದು ಆರೋಪಿಸಿ ಪ್ರತಿಭಟನೆ ಮಾಡುವ ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ, ಪೊಲೀಸರು ಹಿಡಿದು ಕೊಟ್ಟ ಗೋವುಗಳನ್ನು ಸಲಹುವುದಕ್ಕೆ ಸಾಧ್ಯವಿಲ್ಲವೇ? ಅಲ್ಲದೆ, ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಗೆ ಸೇರಿದ ಬಹಳಷ್ಟು ಗೋಶಾಲೆಗಳಿವೆ. ಗೋವುಗಳನ್ನು ಸಲಹಲು ಸರ್ಕಾರಿ ಫಂಡ್ ಇಲ್ಲವೆನ್ನುವ ಈ ಗೋಶಾಲೆಗಳಿಗೆ ಇತ್ತೀಚೆಗಷ್ಟೆ ಸರ್ಕಾರದ ಅನುದಾನ ಲಭಿಸಿದ್ದನ್ನು ನೆನಪಿಸಬೇಕು.

ಮಂಗಳೂರು ನಗರ ಹೊರವಲಯದ ಪಜೀರಿನಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ ಸೇರಿದ ಗೋಶಾಲೆಗೆ 12 ಲಕ್ಷ ರೂ. ಸೇರಿದಂತೆ ಮಂಗಳೂರಿನ ವಿವಿಧ ಗೋಶಾಲೆಗಳಿಗೆ ಇತ್ತೀಚೆಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ 25 ಲಕ್ಷ ರೂ.ಗಳ ಚೆಕ್ ವಿತರಿಸಿದ್ದರು.

ಆದರೆ, ಈಗ ಗೋವುಗಳ ಪಾಲನೆಗೆ ಮಾತ್ರ ಗೋಶಾಲೆಗಳಿಗೆ ಫಂಡ್ ಇಲ್ಲವೆಂದು ಹಿಂದೂ ಸಂಘಟನೆಗಳು ನೆಪ ಹೇಳುತ್ತಿರುವುದು ಮೂರು ಮುಕ್ಕಾಲಿನ ಮರ್ಯಾದೆಯನ್ನೂ ಕಳಕೊಂಡಂತಾಗಿದೆ.

ವಿಶೇಷ ಅಂದರೆ, ಬಹುತೇಕ ಗೋಶಾಲೆಗಳಿಗೆ ಸರ್ಕಾರದ ಗೋಮಾಳ ಭೂಮಿಯನ್ನು ಉಚಿತವಾಗಿ ಕೊಡಲಾಗಿದೆ. ಗೋವುಗಳ ಪಾಲನೆಯ ಉದ್ದೇಶದಿಂದಲೇ ಪಜೀರು ಗೋಶಾಲೆಗೆ ಹತ್ತು ಎಕರೆ ಗೋಮಾಳ ಭೂಮಿಯನ್ನು ನೀಡಲಾಗಿತ್ತು ಅನ್ನೋದನ್ನು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿ ಹೇಳುತ್ತಾರೆ.

ಅಲ್ಲದೆ, ಪಜೀರು ಗೋಶಾಲೆ ವಿಶ್ವ ಹಿಂದು ಪರಿಷತ್ತಿನ ಮುಖಂಡರಿಗೆ ಸೇರಿದ್ದರೂ, ಗೋವುಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಗೋವಿನ ವಿಚಾರದಲ್ಲಿ ಬೀದಿ ರಾಜಕೀಯ ಮಾಡುವ ಸಂಘಟನೆಗಳ ಮುಖವಾಡವನ್ನೇ ಕಳಚುವಂತೆ ಮಾಡಿದೆ.

ಎರಡು ತಿಂಗಳ ಹಿಂದೆ ಮಂಗಳೂರಿನ ಸ್ಮಾರ್ಟ್ ಸಿಟಿಯ ಅನುದಾನದಡಿ 15 ಕೋಟಿ ಮೊತ್ತವನ್ನು ಕುದ್ರೋಳಿ ಕಸಾಯಿಖಾನೆಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಸಾಯಿಖಾನೆಗೆ ಹಣ ನೀಡುತ್ತಾರೆ, ಗೋಶಾಲೆಗೆ ಅನುದಾನ ನೀಡಲ್ಲ ಅನ್ನುವ ಆರೋಪವನ್ನು ಹಿಂದೂ ಸಂಘಟನೆಗಳು ಮಾಡಿದ್ದವು. ಅಲ್ಲದೆ, ಕುದ್ರೋಳಿ ಕಸಾಯಿಖಾನೆಗೆ ಅನುದಾನ ನೀಡದಂತೆ ಪ್ರತಿಭಟನೆಯನ್ನೂ ನಡೆಸಿದ್ದವು. ಇದೇ ವಿಚಾರ ಮಂಗಳೂರಿನ ಸಂಸದ ನಳಿನ್ ಕುಮಾರ್ ಮತ್ತು ಸಚಿವ ಯು.ಟಿ.ಖಾದರ್ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿತ್ತು.
ದೊಡ್ಡ ಗಾತ್ರದ ಹೋರಿಗಳನ್ನು ದೇವಸ್ಥಾನಗಳಲ್ಲಿ ಸಾಕಲು ಅವಕಾಶ ಇದ್ದರೂ, ಈ ಕೆಲಸವನ್ನು ಸಂಘಟನೆಗಳು ಮಾಡಲು ತಯಾರಿಲ್ಲ. ಮಂಗಳೂರಿನ ಗೋರಕ್ಷಕರು ಈಗೆಲ್ಲಿದ್ದಾರೆ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos