ಸಿಕೆ ನಾಯ್ಡು ಟ್ರೋಫಿ ಗೆದ್ದ ಕರ್ನಾಟಕ

ಸಿಕೆ ನಾಯ್ಡು ಟ್ರೋಫಿ ಗೆದ್ದ ಕರ್ನಾಟಕ

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ 23 ವರ್ಷದೊಳಗಿನವರ ಸಿಕೆ ನಾಯ್ಡು ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸ್ಮರಣ್ ​ನಾಯಕತ್ವದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 358 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಮ್ಯಾಕ್ನೀಲ್ 68 ರನ್ ಸಿಡಿಸಿದರೆ, ಮತ್ತೊಬ್ಬ ಆರಂಭಿಕ ಪ್ರಕರ್ ಚತುರ್ವೇದಿ 33 ರನ್​ಗಳ ಕಾಣಿಕೆ ನೀಡಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕೃತಿಕ್ ಕೃಷ್ಣ 66 ರನ್​ ಕಲೆಹಾಕಿದರು.

ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡ ಕೇವಲ 139 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಆರಾಧ್ಯ ಯಾದವ್ ಮಾತ್ರ 66 ರನ್ ಕಲೆಹಾಕಿ ತಂಡದ ಪರ ಏಕೈಕ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿದರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ.

ಉತ್ತರ ಪ್ರದೇಶ ತಂಡವನ್ನು 139 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 219 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ ಎರಡನೇ ಇನ್ನಿಂಗ್ಸ್​ನಲ್ಲಿ 585 ರನ್ ಕಲೆಹಾಕಿತು.

ಗೆಲುವಿಗೆ 804 ರನ್​​ಗಳ ಬೃಹತ್ ಗುರಿ ಪಡೆದಿದ್ದ ಉತ್ತರ ಪ್ರದೇಶ ತಂಡ ಅಂತಿಮ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 174 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ಹೀಗಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಆದರೆ ಮೊದಲ ಇನ್ನಿಂಗ್ಸ್​ನಲ್ಲಿ 358 ರನ್ ಕಲೆಹಾಕಿ ಮುನ್ನಡೆ ಕಾಯ್ದುಕೊಂಡಿದ್ದ ಕರ್ನಾಟಕ ತಂಡ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos