ಇಡೀ ದೇಶಕ್ಕೆ ಕರ್ನಾಟಕ ಮಾದರಿ: ಸುರೇಶ್ ಕುಮಾರ್

ಇಡೀ ದೇಶಕ್ಕೆ ಕರ್ನಾಟಕ ಮಾದರಿ: ಸುರೇಶ್ ಕುಮಾರ್

ಯಲಹಂಕ: ಇಡೀ ದೇಶದಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಹೊಂದಿದ ಮೊದಲ ರಾಜ್ಯ ಕರ್ನಾಟಕ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಜಕ್ಕೂರಿನ ಎಂಸಿಇಎಸಿಎಚ್ ಬಡಾವಣೆಯ ಡಾ. ಶಿವರಾಮ ಕಾರಂತ ನಗರದ ೨ನೇ ಹಂತದಲ್ಲಿ ಶಾಖಾ ಗ್ರಂಥಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ‘ಕಳೆದ ಆರು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ೨೭೨ ಡಿಜಿಟಲ್ ಗ್ರಂಥಾಲಯಗಳು ಕರ‍್ಯಾರಂಭಗೊಂಡಿವೆ’ ಎಂದರು.

ಕೋವಿಡ್ ಕಾರಣದಿಂದ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆಯಪ್ ಲೋಕಾರ್ಪಣೆಗೊಳಿಸಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಈ ಆಪ್ ಬಳಸುತ್ತಿದ್ದಾರೆ. ಒಂದು ಲಕ್ಷಕ್ಕೂ ಮೀರಿದ ಪುಸ್ತಕಗಳು ಆಪ್‌ನಲ್ಲಿ ಲಭ್ಯವಿವೆ. ೧೫ ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ’ ಎಂದರು.

ರಾಜ್ಯದಾದ್ಯಂತ ೬,೮೪೧ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳಲ್ಲಿ ಅವಶ್ಯಕ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

೧ ಕೋಟಿ ವೆಚ್ಚದಲ್ಲಿ ಗ್ರಂಥಾಲಯ: ‘ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘದವರು ಉಚಿತವಾಗಿ ನೀಡಿದ ನಿವೇಶನದಲ್ಲಿ ೧ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಕಟ್ಟಡವು ಮೂರು ಅಂತಸ್ತಿನಿಂದ ಕೂಡಿದ್ದು, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವಿವಿಧ ವಿಭಾಗಗಳನ್ನು ಸೃಜಿಸಲಾಗುವುದು’ ಎಂದರು.

ಶಿವರಾಮ ಕಾರಂತರಿಗೆ ಮಕ್ಕಳೆಂದರೆ ಬಲು ಮೆಚ್ಚುಗೆ ಇರುವುದರಿಂದ ಮಕ್ಕಳಿಗಾಗಿ ಗ್ರಂಥಾಲಯದಲ್ಲಿ ವಿಶೇಷ ವಿಭಾಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವಿಭಾಗ ಇರಲಿದೆ. ಸ್ಥಳೀಯರ ಬೇಡಿಕೆಯಂತೆ ಗ್ರಂಥಾಲಯದ ಎದುರು ಡಾ. ಶಿವರಾಮ ಕಾರಂತರ ಪ್ರತಿಮೆ ಸ್ಥಾಪಿಸಲು ಕ್ರಮ ವಹಿಸಲಾಗುವುದು’ ಎಂದೂ ಸಚಿವರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos