ಉನ್ನತ ಶಿಕ್ಷಣಕ್ಕೆ ಕರ್ನಾಟಕವೇ ವಿದ್ಯಾಕಾಶಿ

ಉನ್ನತ ಶಿಕ್ಷಣಕ್ಕೆ ಕರ್ನಾಟಕವೇ ವಿದ್ಯಾಕಾಶಿ

ಬೆಂಗಳೂರು, ಸೆ. 25: ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಅತ್ಯಂತ ಅಚ್ಚುಮೆಚ್ಚಿನ ತಾಣ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ಕರುನಾಡು ಯಶಸ್ವಿಯಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ- ಎಂಎಚ್‌ಆರ್‌ಡಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಆಲ್ ಇಂಡಿಯಾ ಸರ್ವೇ ಆಫ್ ಹೈಯರ್ ಎಜುಕೇಷನ್- ಎಐಎಸ್‌ಎಚ್‌ಇ ಎಂಬ ವರದಿಯನ್ನು ಎಂಎಚ್‌ಆರ್‌ಡಿ ಸಿದ್ದಪಡಿಸಿದ್ದು, 2018-19 ಸಾಲಿನಲ್ಲಿ ಅಫ್ಘಾನಿಸ್ತಾನ ಮತ್ತು ನೇಪಾಳದಿಂದ 47,427 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಭಾರತಕ್ಕೆ ಬಂದಿದ್ದಾರೆ. ಅವರಲ್ಲಿ 10,023 ಮಂದಿ ಕರ್ನಾಟಕದಲ್ಲಿ ಉನ್ನತ ಅಧ್ಯಯನಕ್ಕೆ ಮುಂದಾಗಿದ್ದಾರೆ. ಭಾರತಕ್ಕೆ ಬಂದಿದ್ದ 164 ರಾಷ್ಟ್ರಗಳ ವಿದ್ಯಾರ್ಥಿಗಳ ಪೈಕಿ 2015-16ವರ್ಷದಲ್ಲಿ 14,500 ಮಂದಿ ವಿದೇಶಿ ವಿದ್ಯಾರ್ಥಿಗಳು ಕರ್ನಾಟಕದ ವಿದ್ಯಾಸಂಸ್ಥೆಗಳತ್ತ ಆಕರ್ಷಿತರಾಗಿದ್ದರು.

2012-13ರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಭಾರತಕ್ಕೆ ಬಂದಿರುವ ವಿದೇಶಿ ವಿದ್ಯಾರ್ಥಿಗಳ ಪಟ್ಟಿಯನ್ನು ಎಂಎಚ್‌ಆರ್‌ಡಿ ತಯಾರಿಸುತ್ತಿದೆ. ಅಂದಿನಿಂದಲೂ ಕರ್ನಾಟಕ ಪ್ರಥಮ ಸ್ಥಾನ ಕಾಯ್ದುಕೊಳ್ಳುತ್ತಾ ಬಂದಿದೆ. ಭಾರತಕ್ಕೆ ಬರುವ ಒಟ್ಟು ವಿದೇಶಿ ವಿದ್ಯಾರ್ಥಿಗಳಲ್ಲಿ ಶೇ.20 ರಿಂದ ಶೇ.35 ವಿದ್ಯಾರ್ಥಿಗಳನ್ನು ಕರ್ನಾಟಕವೇ ತನ್ನತ್ತ ಸೆಳೆಯುತ್ತಿದೆ.

962 ವಿಶ್ವವಿದ್ಯಾಲಯಗಳು, 38,179 ಕಾಲೇಜುಗಳು ಹಾಗೂ 9,190 ಸ್ವತಂತ್ರ ಶಿಕ್ಷಣ ಸಂಸ್ಥೆಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವು. ಬಹುತೇಕ ವಿದೇಶಿ ವಿದ್ಯಾರ್ಥಿಗಳು ನೆರೆಹೊರೆ ರಾಷ್ಟ್ರಗಳವರೇ ಆಗಿದ್ದಾರೆ. ನೇಪಾಳದಿಂದ ಶೇ.26.9 ವಿದ್ಯಾರ್ಥಿಗಳು ಬಂದಿದ್ದು ಅತಿ ಹೆಚ್ಚಾಗಿದೆ. ಅಫ್ಘಾನಿಸ್ತಾನ ಶೇ.9.8 ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಬಾಂಗ್ಲಾದೇಶ ಶೇ.4.4, ಸುಡಾನ್ ಶೇ.4, ಭೂತಾನ್ 3.8 ಮತ್ತು ನೈಜೀರಿಯಾದ ಶೇ.3.4 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ.

ವಿದೇಶಿ ವಿದ್ಯಾರ್ಥಿಗಳ ಪೈಕಿ ಶೇ.73.4 ಮಂದಿ ಪದವಿ ಕೋರ್ಸ್ಗಳಿಗೆ ದಾಖಲಾಗಿದ್ದಾರೆ. ಶೇ.16.1 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಾರೆ.

ಬಿ.ಟೆಕ್ ಅತಿಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದು, 8,861 ಮಂದಿ ದಾಖಲಾಗಿದ್ಧಾರೆ. ನಂತರ ಬಿಬಿಎಗೆ 3,354 ಬಿ.ಎಸ್‌ಸಿಗೆ 3,320 ಮತ್ತು ಬಿ.ಎಗೆ 2,226 ಮಂದಿ ದಾಖಲಾಗಿದ್ದಾರೆ. ಉಳಿದಂತೆ ಬಿ. ಫಾರ್ಮಾ, ಬಿಸಿಎ, ಎಂಬಿಬಿಎಸ್, ನರ್ಸಿಂಗ್ ಮತ್ತು ಬಿಡಿಎಸ್ ವಿದೇಶಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕೋರ್ಸ್ಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos