ಹಲ್ಲೆ ಆರೋಪಿ ಕಂಪ್ಲಿ ಶಾಸಕ ಗಣೇಶ್ ಗೆ ಮೂರು ಶಸ್ತ್ರಚಿಕಿತ್ಸೆ..!

ಹಲ್ಲೆ ಆರೋಪಿ ಕಂಪ್ಲಿ ಶಾಸಕ ಗಣೇಶ್ ಗೆ ಮೂರು ಶಸ್ತ್ರಚಿಕಿತ್ಸೆ..!

ಬೆಂಗಳೂರು, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಅನಾರೋಗ್ಯದಿಂದ ಬಳಲುತ್ತಿರುವ ಕಂಪ್ಲಿ ಶಾಸಕ ಗಣೇಶ್​ಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫೆಬ್ರವರಿ 21ರಂದು ಕಂಪ್ಲಿ ಶಾಸಕ ಗಣೇಶ ಬಂಧನವಾದ ಬಳಿಕ ಈವರೆಗೂ ಬೇಲ್ ಸಿಕ್ಕಿಲ್ಲ. ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಈಗಲ್ ಟನ್ ರೆಸಾರ್ಟ್​ನಲ್ಲಿ ಹಲ್ಲೆ ನಡೆಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ ಶಾಸಕ ಗಣೇಶ್. ಜೈಲು ಸೇರಿ ಸುಮಾರು ಎರಡು ತಿಂಗಳು ಆಗ್ತಾ ಬಂದರೂ, ಸೆಕ್ಷನ್ 307 ಅಡಿ ಪ್ರಕರಣ ದಾಖಲಾದ ಹಿನ್ನೆಲೆ ಇನ್ನೂ ಜಾಮೀನು ಸಿಕ್ಕಿಲ್ಲ. ಇದೀಗ ಆರೋಗ್ಯ ಸರಿಯಿಲ್ಲದ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಗಣೇಶ್​ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಲು ಸೇರಿದ ದಿನದಿಂದ ಶಾಸಕ ಗಣೇಶ್​ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಬೆನ್ನು ಮೂಳೆ ನೋವು, ಮೂತ್ರಕೋಶ ಹಾಗೂ ಹರ್ಣಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದ್ರೂ ಕೂಡ ಅವರು ಗುಣಮುಖರಾಗದ ಕಾರಣ ಜೈಲು ಅಧಿಕಾರಿಗಳ ಅನುಮತಿ ಮೇರೆಗೆ ಗಣೇಶ್‌ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗ್ತಿದೆ. ಇದೀಗ ಮೂರು ಪ್ರಮುಖ ಆಪರೇಷನ್​ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಕಂಪ್ಲಿ ಗಣೇಶ್ ಮೇಲೆ ಬಿಡದಿ ಠಾಣೆಯಲ್ಲಿ ಸೆಕ್ಷನ್​ 323-ಹಲ್ಲೆ, 324-ಮಾರಕಾಸ್ತ್ರಗಳಿಂದ‌ ಹಲ್ಲೆ, 307-ಕೊಲೆ ಯತ್ನ, 504 -ಅವಾಚ್ಯ ಪದಗಳಿಂದ‌ ನಿಂದನೆ, 506 -ಕೊಲೆಬೆದರಿಕೆ ಇಷ್ಟು ಪ್ರಕರಣಗಳ ಅಡಿ ಕೇಸು ದಾಖಲಾಗಿದ್ದು, ಜನಪ್ರತಿನಿಧಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಗೊಂಡ ಹಿನ್ನೆಲೆ ಶಾಸಕ ಗಣೇಶ್‌ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಪ್ಲಿ ಗಣೇಶ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos